
ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಶನಿವಾರ ನಡೆದ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕೇರಿಕೆಯಾಗಿದ್ದು, ಗಾಯಾಳುಗಳ ಸಂಖ್ಯೆಯಲ್ಲೂ ಕೂಡ ಗಣನೀಯ ಏರಿಕೆಯಾಗಿದೆ.
ಮೂಲಗಳ ಪ್ರಕಾರ ಇಸಿಸ್ ಉಗ್ರ ಸಂಘಟನೆ ಹೊಣೆಹೊತ್ತಿರುವ ಈ ದಾಳಿಯಲ್ಲಿ ಈ ವರೆಗೂ ಕನಿಷ್ಠ 80 ಮಂದಿ ಮೃತಪಟ್ಟಿದ್ದು, 231ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಆಫ್ಘಾನಿಸ್ತಾನದ ಸಾರ್ವಜನಿಕ ಆರೋಗ್ಯ ಸಚಿವ ವಾಹೀದ್ ಮಜ್ರೋಹ್ ಅವರು, ಸಾವಿನ ಸಂಖ್ಯೆ ಏರಿಕೆಯಾಗಿರುವುದನ್ನು ಖಚಿತ ಪಡಿಸಿದ್ದು, ಗಂಭೀರವಾಗಿ ಗಾಯಗೊಂಡವರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುವ ಸಾಧ್ಯತೆ ಗಳಿವೆ ಎಂದು ಹೇಳಿದ್ದಾರೆ.
ನಿನ್ನೆ ಕಾಬೂಲ್ ನಲ್ಲಿ ಆಫ್ಘಾನಿಸ್ತಾನ ಸರ್ಕಾರದ ಉದ್ದೇಶಿತ ವಿದ್ಯುತ್ ಸಂಪರ್ಕ ಯೋಜನೆ ಮಾರ್ಗ ಬದಲಾವಣೆ ವಿರೋಧಸಿ ಕಾಬುಲ್ ನ ದೆಹ್ ಮೆಜಂಗ್ ಸರ್ಕಲ್ ನಲ್ಲಿ ಸಾವಿರಾರು ಜನ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಈ ಅವಳಿ ಬಾಂಬ್ ಸ್ಫೋಟಗೊಂಡಿತ್ತು. ಅಲ್ಲದೆ ಸ್ಥಳದಲ್ಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಮತ್ತು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ತಮ್ಮ ಪ್ರಾಂತ್ಯದ ಮೂಲಕ ಹಾದು ಹೋಗುವ ವಿದ್ಯುತ್ ಮಾರ್ಗವನ್ನು ಬದಲಿಸಿದ ಹಿನ್ನೆಲೆಯಲ್ಲಿ ಸಮುದಾಯದ ಸಾವಿರಾರು ಜನರು ಶನಿವಾರ ಕಾಬೂಲ್ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಪ್ರತಿಭಟನಾಕಾರರು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ವಿರುದ್ಧ ಘೊಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಾಥಮಿಕ ಹೇಳಿಕೆ ಪ್ರಕಾರ ಪ್ರತಿಭಟನಾಕಾರರ ಸಮ್ಮುಖದಲ್ಲಿ ಬುರ್ಖಾ ಧರಿಸಿದ್ದ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.
ಇಸಿಸ್ ಕಿತ್ತೊಗೆಯಲು ಭಾರಿ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ ಘನಿ
ಇನ್ನು ಇತ್ತ ಆಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಬಲವಾಗಿ ಬೇರೂರುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬೇರು ಸಮೇತ ಕಿತ್ತೊಗೆಯಲು ಆಫ್ಘನ್ ಪ್ರಧಾನಿ ಅಶ್ರಫ್ ಘನಿ ಅವರು ನಿರ್ಧರಿಸಿದ್ದು, ವಿದೇಶಿ ಪಡೆಗಳ ನೆರವಿನೊಂದಿಗೆ ಭಾರಿ ಮಿಲಿಟರಿ ಕಾರ್ಯಾಚರಣೆಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಇಸಿಸ್ ಪ್ರಾಬಲ್ಯ ವಿರುವ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಸೇನಾ ಪಡೆ ಕಾರ್ಯಾಚರಣೆ ನಡೆಸಲಿದೆ. ಇದಕ್ಕೆ ಅಮೆರಿಕದ ನ್ಯಾಟೋ ಪಡೆಗಳು, ಬ್ರಿಟನ್ ಸೇರಿದಂತೆ ವಿಶ್ವಸಂಸ್ಥೆಯ ಶಾಂತಿಪರಿಪಾಲನಾ ಪಡೆಗಳು ಕೂಡ ಸಾಥ್ ನೀಡಲಿವೆ ಎಂದು ಹೇಳಲಾಗುತ್ತಿದೆ.
Advertisement