ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಟ್ರಂಪ್ ನಂಬುವಂತಿಲ್ಲ: ಹಿಲರಿ ಕ್ಲಿಂಟನ್

ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಗೆ ಒಪ್ಪಿಗೆ ನೀಡಿರುವ ಮೊದಲ ಮಹಿಳಾ ಸ್ಪರ್ಧಿ ಹಿಲರಿ ಕ್ಲಿಂಟನ್ ಅವರು, ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು...
ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಹಿಲರಿ ಕ್ಲಿಂಟನ್ (ಎಪಿ ಚಿತ್ರ)
ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಹಿಲರಿ ಕ್ಲಿಂಟನ್ (ಎಪಿ ಚಿತ್ರ)

ಫಿಲಡೆಲ್ಫಿಯಾ: ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಗೆ ಒಪ್ಪಿಗೆ ನೀಡಿರುವ ಮೊದಲ ಮಹಿಳಾ ಸ್ಪರ್ಧಿ ಹಿಲರಿ ಕ್ಲಿಂಟನ್ ಅವರು, ತಮ್ಮ ಪ್ರತಿಸ್ಪರ್ಧಿ  ಡೊನಾಲ್ಡ್ ಟ್ರಂಪ್ ಅವರನ್ನು ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ನಂಬುವಂತಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯನ್ನು ಒಪ್ಪಿಕೊಂಡು ಮಾತನಾಡಿದ ಹಿಲರಿ ಕ್ಲಿಂಟನ್ ಅವರು,  ರಿಪಬ್ಲಿಕನ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಟ್ರಂಪ್ ಅಮೆರಿಕವನ್ನು ರಾಷ್ಟ್ರವನ್ನು ವಿಭಜಿಸಿ ಆಡಳಿತ ನಡೆಸುವ  ಉದ್ದೇಶಹೊಂದಿದ್ದಾರೆ. ಇಂತಹ ವ್ಯಕ್ತಿಯ ಕೈಗೆ ವಿಶ್ವದ ಬಲಿಷ್ಠ ಪರಮಾಣು ರಾಷ್ಟ್ರದ ಪ್ರಾತಿನಿಧಿತ್ವ ನೀಡುವುದು ಸರಿಯಲ್ಲ. ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಟ್ರಂಪ್ ಅವರನ್ನು ನಂಬುವಂತಿಲ್ಲ ಎಂದು ಹಿಲರಿ  ಹೇಳಿದರು.

ಅಂತೆಯೇ "ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಸಾಕಷ್ಟು ಸಮಸ್ಯೆಗಳನ್ನು ಮತ್ತು ಸ್ಪರ್ಧೆಗಳನ್ನು ಎದುರಿಸುತ್ತಿದೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ಸಮರ್ಥ ನಾಯಕತ್ವ, ಸಾಮೂಹಿಕ  ಸ್ಪೂರ್ತಿಯ ಅಗತ್ಯವಿದೆ. ದೇಶದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಕುರಿತಂತೆ ನಾವು ಸ್ಪಷ್ಟವಾಗಿದ್ದು, ಮುಂದಿನ ಎಲ್ಲ ರೀತಿಯ ಸವಾಲುಗಳಿಗೆ ನಾವು ಸಿದ್ಧರಿದ್ದೇವೆ. ಅಮೆರಿಕದ ತೀರಾ  ಕೆಳಮಟ್ಟದ ಹಿಂದುಳಿದ ವರ್ಗದ ಜನರಿಂದ ಹಿಡಿದು ಉನ್ನತ ಮಟ್ಟದ ಮಂದಿಯೂ ಕೂಡ ನಮ್ಮ ಅಭಿವೃದ್ಧಿ ಕಲ್ಪನೆಯಲ್ಲಿದ್ದಾರೆ. ಸಮಗ್ರ ಅಭಿವೃದ್ದಿಯೊಂದೇ ನಮ್ಮ ಗುರಿಯಾಗಿದ್ದು, ಇದಕ್ಕಾಗಿ  ನಾವು ಶ್ರಮಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ವಿಶ್ವ ಸಮುದಾಯದಿಂದ ಅಮೆರಿಕ ವಿಭಜಿಸಲು ಟ್ರಂಪ್ ಪ್ರಯತ್ನ
ಇದೇ ವೇಳೆ ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿಲರಿ ಕ್ಲಿಂಟನ್, ವಿಶ್ವ ಸಮುದಾಯದಿಂದ ಅಮೆರಿಕ ರಾಷ್ಟ್ರವನ್ನು ಬೇರ್ಪಡಿಸಲು  ಪ್ರಯತ್ನಿಸುತ್ತಿದ್ದಾರೆ. ಟ್ವೀಟ್ ಮೂಲಕ ಜನರನ್ನು ಕಟ್ಟಿ ಹಾಕುವ ಮನುಷ್ಯನನ್ನು ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ  ಹಿಲರಿ ಕ್ಲಿಂಟನ್ ಪುತ್ರಿ ಚೆಲ್ಸಿಯಾ ಅವರು, ತಮ್ಮ ತಾಯಿಯೇ ನನ್ನ ಪಾಲಿನ ಹೀರೋ ಆಗಿದ್ದು, ಅವರ ಮುಂದಿನ ಅಮೆರಿಕ ಅಧ್ಯಕ್ಷರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com