
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಉಗ್ರರ ಹಾವಳಿ ಮಿತಿ ಮೀರಿದ್ದು, ಉಗ್ರರ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಪಾಕ್ ಸೇನೆ ಹಳೇ ಮನೆಗಳ ಛಾವಣಿಗಳನ್ನು ಕಿತ್ತು ಬಿಸಾಡಿದೆ.
ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನದಲ್ಲಿರುವ ಹಳೆಯ ಮನೆಗಳಲ್ಲಿ ಉಗ್ರರು ಅಡಗಿಕೊಳ್ಳುವುದನ್ನು ತಡೆಯಲು ಪಾಕ್ ಸೇನಾಧಿಕಾರಿಗಳು ಹೊಸ ತಂತ್ರ ಕಂಡುಕೊಂಡಿದ್ದು, ಈ ಭಾಗದ ಎಲ್ಲ ಮನೆಗಳ ಛಾವಣಿಯನ್ನೇ ಸೇನೆ ಕಿತ್ತೆಸೆದಿದ್ದಾರೆ. ಉಗ್ರರ ದಾಳಿ ಪೀಡಿತ ಈ ಪ್ರದೇಶದಲ್ಲಿನ ನಿವಾಸಿಗಳು ಉಗ್ರರ ದಾಳಿಗೆ ಹೆದರಿ ಇಲ್ಲಿನ ಬಹುತೇಕ ಗ್ರಾಮಸ್ಥರು ತಮ್ಮ ಮನೆ ಮತ್ತು ನಿವಾಸಗಳನ್ನು ತೊರೆದು ಗುಳೆ ಹೋಗಿದ್ದಾರೆ. ಹೀಗಾಗಿ ಇಲ್ಲಿನ ಗ್ರಾಮದಲ್ಲಿನ ಬಹುತೇರ ಮನೆಗಳು ಖಾಲಿಯಾಗಿದ್ದು, ಹೀಗೆ ಖಾಲಿ ಇರುವ ಮನೆಗಳಲ್ಲಿ ಉಗ್ರರು ಅಡಗಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿ ಪಾಕಿಸ್ತಾನ ಸೇನೆಯ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಉಗ್ರರು ಇಂಥ ಖಾಲಿ ಮನೆಗಳ ಶೀಟ್‌ಗಳ ಅಡಿಯಲ್ಲಿ ಅಡಗಿಕೊಳ್ಳುತ್ತಾರೆ. ಇದನ್ನು ತಪ್ಪಿಸಲೆಂದೇ ಪಾಕ್ ಸೇನೆ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ತಾಲಿಬಾನ್ ಉಗ್ರರ ಪ್ರಾಬಲ್ಯವಿದ್ದ ದಕ್ಷಿಣ ವಜಿರಿಸ್ತಾನದಲ್ಲಿ ಪ್ರಸ್ತುತ ಪಾಕಿಸ್ತಾನ ಸೇನೆ ಪ್ರಾಬಲ್ಯ ಸಾಧಿಸಿದ್ದು, ಇನ್ನೂ ಹಲವು ಉಗ್ರರು ಇಲ್ಲಿ ಅಡಗಿರುವ ಸಾಧ್ಯತೆಗಳಿವೆ. ಹೀಗಾಗಿ ಸೇನಾಧಿಕಾರಿಗಳು ಇಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಈ ಭಾಗದಲ್ಲಿ 2009ರಲ್ಲಿ ಆರಂಭವಾದ ಸೇನೆ ಹಾಗೂ ಉಗ್ರರ ಕದನದಲ್ಲಿ ಸುಮಾರು 72 ಸಾವಿರ ಕುಟುಂಬಗಳು ನಿರಾಶ್ರಿತವಾಗಿವೆ. 7 ವರ್ಷಗಳ ನಂತರ ಈಗ ಸುಮಾರು 42 ಸಾವಿರ ಕುಟುಂಬಗಳನ್ನು ಈ ಭಾಗಕ್ಕೆ ಕರೆತರಲಾಗಿದೆ. ಈ ವರ್ಷ ಇನ್ನಷ್ಟು ಕುಟುಂಬಗಳನ್ನು ಕರೆತರುವ ನಿರೀಕ್ಷೆಯಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ರಸ್ತೆ, ಆಸ್ಪತ್ರೆ, ಶಾಲೆಗಳನ್ನು ಸೇನೆ ಮರುನಿರ್ಮಾಣ ಮಾಡಿದೆ. ಮನೆ ಕಟ್ಟಿಕೊಳ್ಳಲೂ ಇಲ್ಲಿನ ಜನರಿಗೆ ಸರ್ಕಾರ ಧನಸಹಾಯ ಮಾಡುತ್ತಿದೆ. ಆದರೆ ಇಲ್ಲಿನ ಕೆಲವು ಮನೆಗಳು ಉಗ್ರರ ದಾಳಿ ಹಾಗೂ ಪ್ರಾಕೃತಿಕ ವಿಕೋಪಗಳಿಂದಾಗಿ ಹಾಳಾಗಿದ್ದರೆ, ಕೆಲವು ಆಯಕಟ್ಟಿನ ಪ್ರದೇಶಗಳ ಮನೆಗಳ ಛಾವಣಿಯನ್ನು ಸೇನೆಯೇ ಕಿತ್ತೆಸೆದಿದೆ. ಇಲ್ಲಿ ಎಲ್ಲ ಮನೆಗಳೂ ಹಾಳು ಬಿದ್ದ ಕೋಟೆಯಂತೆ ಕಾಣುತ್ತವೆ.
Advertisement