ಟೈಗರ್ ಟೆಂಪಲ್ ನಿಂದ 137 ಹುಲಿಗಳ ಸ್ಥಳಾಂತರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಾಂಕ್ಯಾಕ್: ಥಾಯ್ಲೆಂಡ್ ಗೆ ಬರುವ ವಿವಿಧ ರಾಷ್ಟ್ರಗಳ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದ್ದ ಹುಲಿ ದೇವಾಲಯ(ಟೈಗರ್ ಟೆಂಪಲ್) ನಿಂದ 137 ಹುಲಿಗಳನ್ನು ಸ್ಥಳಾಂತರಿಸಲಾಗಿದೆ. 
ಬ್ಯಾಂಕಾಕ್ ನಿಂದ 140 ಕಿ.ಮೀ ದೂರ ಕಂಚನ್ ಬುರಿಯಲ್ಲಿರುವ ಈ ಬೌದ್ಧ ದೇವಾಲಯದಲ್ಲಿ ಪ್ರಾಣಿಗಳ ಮೇಲೆ ಹಿಂಸೆ ನಡುಯುತ್ತಿದೆ ಮತ್ತು ಪ್ರಾಣಿಗಳ ಅಕ್ರಮ ಸಾಗಾಣಿಕೆಗೂ ಇದು ಕೇಂದ್ರವಾಗುತ್ತಿದೆ ಎಂಬ ಆರೋಪಗಳ ಕೇಳಿ ಬಂದ ಬಳಿಕ ದೇವಾಲಯವನ್ನು ಮುಚ್ಚಲು ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಬಂದಿತ್ತು. ಈ ಹಿನ್ನಲೆಯಲ್ಲಿ ಕಳೆದ ಆರು ದಿನಗಳಿಂದ ಇಲ್ಲಿನ ಹುಲಿಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗಿತ್ತು. 137 ಹುಲಿಗಳ ಸ್ಥಳಾಂತರ ಇಂದು ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. 
ರಚಬುರಿ ಕೇಂದ್ರಕ್ಕೆ ಹುಲಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನು ಇತರೆ ಪ್ರಾಣಿಗಳಾದ ಜಿಂಕೆ, ಕಾಡು ಹಂದಿ ಮತ್ತು ನವಿಲುಗಳನ್ನು ಸ್ಥಳಾಂತರಿಸಲಾಗುತ್ತದೆ. ಆದರೆ ಅದಕ್ಕೆ ಇನ್ನು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಟೈಗರ್ ಟೆಂಪಲ್ ಮೇಲೆ ದಾಳಿ ನಡೆಸಿದ ವೇಳೆ, ಹುಲಿ, ಜಿಂಕೆ ಸೇರಿದಂತೆ ಇತರೆ ಪ್ರಾಣಿಗಳ ಅಂಗಾಂಗಳಿಂದ ಮಾಡಲಾಗಿರುವ ವಿವಿಧ ವಸ್ತುಗಳು ಪತ್ತೆಯಾಗಿದೆ. ಅಕ್ರಮ ಪ್ರಾಣಿ ಸಾಗಾಣಿಕೆ ಆರೋಪದಡಿ ಮೂವರು ಬೌದ್ಧ ಸನ್ಯಾಸಿ ಸೇರಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗಷ್ಟೇ ಟೈಗರ್ ಟೆಂಪಲ್ ನಲ್ಲಿ 40 ಸತ್ತ ಹುಲಿ ಮರಿಗಳು ಫ್ರೀಜರ್ ನಲ್ಲಿ ಪತ್ತೆಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಈ ದೇವಾಲಯದ ಆಡಳಿತ ಮಂಡಳಿಯ ಕೆಲವರು ಪ್ರಾಣಿಗಳ ಮತ್ತು ಪ್ರಾಣಿಗಳ ಅಂಗಾಂಗಳ ಅಕ್ರಮ ಮಾರಾಟ ನಡೆಸುತ್ತಿದ್ದಾರೆ ಎಂದು ಕೆಲವು ಪ್ರಾಣಿ ಹಕ್ಕು ಸಂಘಟನೆಗಳವರು ಆರೋಪಿಸಿದ್ದರು. ಅದರಂತೆ ಟೈಗರ್ ಟೆಂಪಲ್ ಮೇಲೆ ದಾಳಿ ನಡೆಸಿದಾಗ ಸತ್ತ ಹುಲಿ ಮರಿಗಳು ಪತ್ತೆಯಾಗಿತ್ತು. ಅಷ್ಟೇ ಅಲ್ಲದೇ, ಫ್ರೀಜರ್ ನಲ್ಲಿ ಸತ್ತ ಹುಲಿ ಮರಿಗಳ ಹಾಗೂ ಇತರೆ ಪ್ರಾಣಿಗಳ ಅಂಗಾಗಳನ್ನು ಇರಿಸಲಾಗಿತ್ತು. ಇನ್ನು ತಪಾಸಣೆ ಕಾರ್ಯ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com