

ವಾಷಿಂಗ್ ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಸಂಸತ್ ನ್ನುದ್ದೇಶಿಸಿ ಮಾತನಾಡಿದ ವೇಳೆ ನೆರೆ ರಾಷ್ಟ್ರಗಳಲ್ಲಿ ಭಯೋತ್ಪಾದನೆಗೆ ಉತ್ತೇಜನ ಸಿಗುತ್ತಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ್ದರು. ಮೋದಿ ಈ ವಿಷಯವನ್ನು ಪ್ರಸ್ತಾಪಿಸಿ ಭಾರತಕ್ಕೆ ವಾಪಸ್ಸಾಗುವುದರೊಳಗೆ ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ತನ್ನ ನೆಲದ ಮೂಲಕ ಭಾರತದ ವಿರುದ್ಧ ಭಯೋತ್ಪಾದನೆ ನಡೆಸುವುದನ್ನು ಹಾಗೂ ಉತ್ತೇಜಿಸುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ನೇರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನ- ಭಾರತದ ಸಂಬಂಧ ಸರಿಹೋಗಲು ಉತ್ತೇಜನ ನೀಡುವುದಕ್ಕೆ ಅಮೆರಿಕ ಆಶಯದ ಭಾಗವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಸರ್ಕಾರಿ ವಕ್ತಾರರಾದ ಮಾರ್ಕ್ ಟೋನರ್ ಹೇಳಿದ್ದಾರೆ.
" ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾತುಕತೆ ವೇಳೆ ಪಾಕಿಸ್ತಾನ ವಿಷಯವನ್ನು ಚರ್ಚಿಸಲಾಗಿದೆ. ಭಾರತ- ಪಾಕಿಸ್ತಾನದ ದೊಂದಿಗೆ ಅಮೆರಿಕ ಹೊಂದಿರುವ ದ್ವಿಪಕ್ಷೀಯ ಸಂಬಂಧ ಬೇರೆ ಬೇರೆಯದ್ದಾಗಿದ್ದು ಅರ್ಹತೆಗೆ ತಕ್ಕಂತೆ ಇದೆ ಎಂದು ಎಂದು ಮಾರ್ಕ್ ಟೋನರ್ ತಿಳಿಸಿದ್ದಾರೆ.