ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ: ಅಕ್ಟೋಬರ್ ನಲ್ಲಿ ಪ್ರಧಾನಿ ಕೆಮರಾನ್ ರಾಜಿನಾಮೆ

ಬಹು ನಿರೀಕ್ಷಿತ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶ ಪ್ರಕಟವಾಗಿದ್ದು, ಜನಮತಗಣನೆಯಲ್ಲಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಬ್ರಿಟನ್....
ಡೇವಿಡ್ ಕೆಮರಾನ್
ಡೇವಿಡ್ ಕೆಮರಾನ್
ಲಂಡನ್: ಬಹು ನಿರೀಕ್ಷಿತ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶ ಪ್ರಕಟವಾಗಿದ್ದು, ಜನಮತಗಣನೆಯಲ್ಲಿ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಡೇವಿಡ್ ಕೆಮರಾನ್ ಅವರು ಪ್ರಕಟಿಸಿದ್ದಾರೆ. ಅಲ್ಲದೆ ಅಕ್ಟೋಬರ್ ವೇಳೆಗೆ ನೂತನ ಪ್ರಧಾನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಯೂರೋಪಿಯನ್ ಒಕ್ಕೂಟ ತೊರೆಯುವಂತೆ ಬ್ರಿಟನ್ ಜನತೆ ಮತ ಹಾಕಿದ್ದು, ಅವರ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಕ್ಯಾಮರೂನ್ ಹೇಳಿದ್ದಾರೆ. 
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದಾಗಿ ಜನಮತಗಣನೆಯಲ್ಲಿ ಸ್ಪಷ್ಟ ಜನಾಭಿಪ್ರಾಯ ಬಂದಿದೆ. ಹೊರಹೋಗುವ ಪರವಾಗಿ ಸುಮಾರು ಷೇ.51. 8ರಷ್ಟು ಮತಗಳು ಹಾಗೂ ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂಬುದರ ಪರವಾಗಿ ಶೇಕಡಾ 48.2ರಷ್ಟು ಮತಗಳು ಬಂದಿವೆ. ಹೀಗಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯುವುದೆಂಬ ಭೀತಿ ಇದೀಗ ವಾಸ್ತವವಾಗಿ ಪರಿಣಮಿಸಿದೆ.
ಪ್ರಮುಖವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಬ್ರೆಕ್ಸಿಟ್ ಪರ ಮತ ಚಲಾಯಿಸಿದ್ದು, ಸ್ಕಾಟ್ಲೆಂಡ್, ಲಂಡನ್ ಮತ್ತು ಉತ್ತರ ಐರ್ಲೆಂಡ್ ಬ್ರೆಕ್ಸಿಟ್ ಗೆ ವಿರೋಧವಾಗಿ ಮತಚಲಾವಣೆ ಮಾಡಿದೆ ಎಂದು  ಹೇಳಲಾಗುತ್ತಿದೆ. 
ಇನ್ನು ಈ ಫಲಿತಾಂಶದ ಕುರಿತಂತೆ ಪ್ರತಿಕ್ರಿಯಿಸಿರುವ ಬ್ರೆಕ್ಸಿಟ್ ಪರ ಬಣ ಇದನ್ನು ಸ್ವಾತಂತ್ರ್ಯ ದಿನ ಎಂದು ಬಣ್ಣಿಸಿದ್ದು, ಬ್ರೆಕ್ಸಿಟ್ ವಿರೋಧಿ ಅಭಿಯಾನ ನಡೆಸಿದ್ದ ಪ್ರಧಾನಿ ಕೆಮರಾನ್ ಪರ ಬಣ ಫಲಿತಾಂಶವನ್ನು ದೊಡ್ಡ ದುರಂತ ಎಂದು ಟೀಕಿಸಿದೆ. ಇಡೀ ವಿಶ್ವದ ಗಮನ ಸೆಳೆದಿದ್ದ ಮತ್ತು ಅಂತಾರಾಷ್ಟ್ರೀಯ ಷೇರುಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಈ ಚುನಾವಣೆಯಲ್ಲಿ ಸುಮಾರು 30 ಮಿಲಿಯನ್ ಮಂದಿ ಮತಚಲಾವಣೆ ಮಾಡಿದ್ದರು.
ಒಕ್ಕೂಟದಿಂದ ಹೊರಗುಳಿಯುತ್ತಿರುವ ಮೊದಲ ದೇಶ ಬ್ರಿಟನ್
28 ರಾಷ್ಟ್ರಗಳನ್ನೊಳಗೊಂಡ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ ಎಂದು ಹೇಳಲಾಗುತ್ತಿದ್ದು. ಒಕ್ಕೂಟ ಸ್ಥಾಪನೆಯಾದಾಗಿನಿಂದ ಈ ವರೆಗೂ ಯಾವುದೇ ರಾಷ್ಟ್ರ ಒಕ್ಕೂಟದಿಂದ ಹೊರನಡೆದಿರಲಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಒಕ್ಕೂಟ ಸೇರಿದ 43 ವರ್ಷಗಳ ಬಳಿಕ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರ ನಡೆಯುತ್ತಿದೆ.
ಕೆಮರಾನ್ ರಾಜಿನಾಮೆಗೆ ಆಗ್ರಹ
ಇನ್ನು ಬ್ರೆಕ್ಸಿಟ್ ವಿರುದ್ಧವಾಗಿ ಅಭಿಯಾನ ನಡೆಸಿದ್ದ ಬ್ರಿಟನ್ ಪ್ರಧಾನಿ ಕೆಮರಾನ್ ರಾಜಿನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಜನಮತ ಸಂಗ್ರಹದಲ್ಲಿ ಕೆಮರಾನ್ ನಿರ್ಣಯ ತಪ್ಪು ಎಂದು  ಜನತೆ ನಿರ್ಧರಿಸಿದ್ದಾರೆ. ಹೀಗಾಗಿ ಕೆಮರಾನ್ ರಾಜಿನಾಮೆ ನೀಡಬೇಕು ಎಂದು ಬ್ರೆಕ್ಸಿಟ್ ಪರ ಬಣದ ನಾಯಕ ನಿಗೆಲ್ ಫರಾಗೆ ಹೇಳಿದ್ದಾರೆ. ಇನ್ನು ಪ್ರತಿಪಕ್ಷಗಳ ಆಗ್ರಹದ ಹೊರತಾಗಿಯೂ  ಯುನೈಟೆಡ್ ಕಿಂಗ್ ಡಮ್ ಗೆ ಕೆಮರಾನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com