ಟರ್ಕಿಯಲ್ಲಿ ತ್ರಿವಳಿ ಆತ್ಮಹತ್ಯಾ ಬಾಂಬ್ ಸ್ಫೋಟ; 36 ಮಂದಿ ಸಾವು
ಇಸ್ತಾನ್ ಬುಲ್: ಟರ್ಕಿ ರಾಜಧಾನಿ ಇಸ್ತಾನ್ ಬುಲ್ ನಲ್ಲಿ ಸಂಭವಿಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಇಸ್ತಾನ್ ಬುಲ್ ಆತಾತುರ್ಕ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಮೂವರು ಆಗಂತುಕುರ ಏಕಾಏಕಿ ಎಕೆ 47 ಗನ್ ಮೂಲಕ ಗುಂಡಿನ ಸುರಿಮಳೆ ಗೈದರು. ಪರಿಣಾಮ ನಿಲ್ದಾಣದಲ್ಲಿದ್ದ ಹತ್ತಾರು ಮಂದಿ ಗುಂಡೇಟಿನಿಂದ ಸಾವನ್ನಪ್ಪಿದರು. ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಉಗ್ರ ಮೇಲೆ ದಾಳಿ ನಡೆಸಿದ ಭದ್ರತಾ ಸಿಬ್ಬಂದಿಗಳು ಓರ್ವ ಉಗ್ರನಿಗೆ ಗುಂಡು ಹೊಡೆಯುತ್ತಿದ್ದಂತೆಯೇ ಆತ ತನ್ನ ಬಳಿ ಇದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡ ಪರಿಣಾಮ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟರು.
ಅಂತೆಯೇ ನಿಲ್ದಾಣದ ಆರೈವಲ್ ಹಾಲ್ ನಲ್ಲಿ ಮತ್ತೆರಡು ಆತ್ಮಹತ್ಯಾ ಬಾಂಬ್ ಸ್ಫೋಟಗಳು ಸಂಭವಿಸಿದ್ದು, ವಿಮಾನಕ್ಕಾಗಿ ಕಾದು ಕುಳಿತಿದ್ದ ಹಲವು ಮಂದಿ ಪ್ರಯಾಣಿಕರು ಇಲ್ಲಿ ಸಾವನ್ನಪ್ಪಿದ್ದಾರೆ. ಅತ್ತ ನಿಲ್ದಾಣದ ಟಿಕೆಟ್ ಬುಕ್ಕಿಂಗ್ ಹಾಲ್ ನಲ್ಲಿ ಬಾಂಬ್ ಸ್ಫೋಟ ಕೇಳಿಬರುತ್ತಿದ್ದಂತೆಯೇ ಟಿಕೆಟ್ ಬುಕ್ಕಿಂಗ್ ಹಾಲ್ ನಲ್ಲಿ ಅವಿತಿದ್ದ ಉಗ್ರರು ನೋಡ ನೋಡುತ್ತಿದ್ದಂತೆಯೇ ಗುಂಡಿನ ಸುರಿಮಳೆ ಗೈದು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಂಬ್ ಸ್ಫೋಟದ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ