ಅಮೆರಿಕದ ಮೇಲೂ ಇಸ್ತಾನ್ ಬುಲ್ ಮಾದರಿಯ ದಾಳಿ ನಡೆಸಲು ಇಸೀಸ್ ಸಿದ್ಧತೆ: ಸಿಐಎ

ಇಸ್ತಾನ್ ಬುಲ್ ನ ಆತಾತುರ್ಕ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಮಾದರಿಯ ದಾಳಿಯನ್ನು ಅಮೆರಿಕಾದಲ್ಲೂ ನಡೆಸಲು ಇಸೀಸ್ ಉಗ್ರ ಸಂಘಟನೆ ಯೋಜನೆ ರೂಪಿಸಿದೆ
ಸಿಐಎ ಮುಖ್ಯಸ್ಥ ಜಾನ್ ಬ್ರೆನ್ನನ್
ಸಿಐಎ ಮುಖ್ಯಸ್ಥ ಜಾನ್ ಬ್ರೆನ್ನನ್

ವಾಷಿಂಗ್ ಟನ್: ಇಸ್ತಾನ್ ಬುಲ್ ನ ಆತಾತುರ್ಕ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಮಾದರಿಯ ದಾಳಿಯನ್ನು ಅಮೆರಿಕಾದಲ್ಲೂ ನಡೆಸಲು ಇಸೀಸ್ ಉಗ್ರ ಸಂಘಟನೆ ಯೋಜನೆ ರೂಪಿಸಿದೆ ಎಂದು ಸಿಐಎ ಮುಖ್ಯಸ್ಥ ಜಾನ್ ಬ್ರೆನ್ನನ್ ಎಚ್ಚರಿಕೆ ನೀಡಿದ್ದಾರೆ.

ಇಸೀಸ್ ಉಗ್ರ ಸಂಘಟನೆಯ ಮುಂದಿನ ಯೋಜನೆಗಳ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಕಲೆಹಾಕಿರುವ ಮಾಹಿತಿಯ ಬಗ್ಗೆ ನನಗೆ ಆತಂಕ ಉಂಟಾಗಿದೆ. ಇಸ್ತಾನ್ ಬುಲ್ ನಲ್ಲಿ ನಡೆಸಿದ ಮಾದರಿಯ ದಾಳಿಯನ್ನು ಇತರ ದೇಶಗಳಲ್ಲಿಯೂ ನಡೆಸುವುದು ಇಸೀಸ್ ಉಗ್ರ ಸಂಘಟನೆಯ ಉದ್ದೇಶವಾಗಿದೆ ಎಂದು ಬ್ರೆನ್ನನ್ ಹೇಳಿದ್ದಾರೆ.

ಪ್ರಮುಖವಾಗಿ ಅಮೆರಿಕದಲ್ಲಿ ಇಸ್ತಾನ್ ಬುಲ್ ಮಾದರಿಯ ದಾಳಿಯನ್ನು ನಡೆಸಲು ಇಸೀಸ್ ಸಿದ್ಧತೆ ನಡೆಸಿದೆ ಎಂದು ಯಾಹೂ ನ್ಯೂಸ್ ಗೆ ಸಂದರ್ಶನ ನೀಡಿರುವ ಸಿಐಎ ಮುಖ್ಯಸ್ಥ ಬ್ರೆನ್ನನ್ ಆತಂಕ ವ್ಯಕ್ತಪಡಿಸಿದ್ದಾರೆ. ಟರ್ಕಿ ರಾಜಧಾನಿ ಇಸ್ತಾನ್ ಬುಲ್ ನಲ್ಲಿ ಇಸೀಸ್ ಉಗ್ರರು ಮಂಗಳವಾರ ರಾತ್ರಿ ನಡೆಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 42 ಮಂದಿ ಸಾವನ್ನಪ್ಪಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದಾಳಿ ನಡೆಯುವುದಕ್ಕೂ 20 ದಿನಗಳ ಹಿಂದೆಯೇ ಟರ್ಕಿಯ ಗುಪ್ತಚರ ಇಲಾಖೆ ಅಲ್ಲಿನ ಸಂಬಂಧಪಟ್ಟ ಭದ್ರತಾ ಇಲಾಖೆಗಳಿಗೆ ಎಚ್ಚರಿಕೆ ರವಾನೆ ಮಾಡಿತ್ತು ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ. ಈ ವರೆಗೂ ಟರ್ಕಿಯಲ್ಲಿ ನಡೆದಿರುವ ಉಗ್ರ ದಾಳಿ ಬಗ್ಗೆ ಯಾವುದೇ ಉಗ್ರ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ.

ಅಮೆರಿಕದ ಸಿಐಎ ಮುಖ್ಯಸ್ಥ ಇಸ್ತಾನ್ ಬುಲ್ ನ ದಾಳಿಯಲ್ಲಿ ಇಸೀಸ್ ಉಗ್ರ ಸಂಘಟನೆ ಕೈವಾಡ ಇದೆ ಎಂದು ನೇರವಾಗಿ ಹೇಳಿಲ್ಲವಾದರೂ ಅದೇ ಮಾದರಿಯ ಆತ್ಮಹತ್ಯಾ ದಾಳಿಯನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದಷ್ಟೇ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com