ಲೈಂಗಿಕ ಗುಲಾಮಿಯರ ನಿರ್ವಹಣೆಗೆ ಇಸಿಸ್ ನಿಂದ "ಭಯಾನಕ ಪದ್ಧತಿ" ಜಾರಿ

ದಿನೇ ದಿನೇ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದ್ದು, ಲೈಂಗಿಕ ಗುಲಾಮಿಯರ ನಿರ್ವಹಣೆಗಾಗಿ ಇಸಿಸ್ ಭಯಾನಕ ಪದ್ಧತಿಯೊಂದನ್ನು ಜಾರಿಗೆ ತಂದಿದೆ...
ಇಸಿಸ್ ಲೈಂಗಿಕ ಗುಲಾಮಿಯರು (ಸಂಗ್ರಹ ಚಿತ್ರ)
ಇಸಿಸ್ ಲೈಂಗಿಕ ಗುಲಾಮಿಯರು (ಸಂಗ್ರಹ ಚಿತ್ರ)
Updated on

ದೊಹುಕ್: ದಿನೇ ದಿನೇ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದ್ದು, ಲೈಂಗಿಕ ಗುಲಾಮಿಯರ ನಿರ್ವಹಣೆಗಾಗಿ ಇಸಿಸ್ ಭಯಾನಕ ಪದ್ಧತಿಯೊಂದನ್ನು ಜಾರಿಗೆ ತಂದಿದೆ.

ಈ ನೂತನ ಪದ್ಧತಿಯ ಅನುಸಾರ ಹದಿನಾರರ ಹರೆಯದ ಬಾಲಕಿಯರನ್ನೂ ಬಿಡದೆ ಮಹಿಳೆಯರನ್ನು ‘ಲೈಂಗಿಕ ಗುಲಾಮರನ್ನಾಗಿಸಿ’ ನಿರಂತರ ಅತ್ಯಾಚಾರ ಮಾಡಲು ಮತ್ತು ಅವರು ಗರ್ಭ  ಧರಿಸದಂತೆ ತಡೆಯಲು ಅವರಿಗೆ ಬಲಾತ್ಕಾರವಾಗಿ ಗರ್ಭ ನಿರೋಧಕ ಗುಳಿಗೆ ನುಂಗಿಸುವ, ಇಂಜೆಕ್ಷನ್ ನೀಡುವ ಪದ್ಧತಿಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಸಂಘಟನೆ ಜಾರಿ  ಮಾಡಿರುವ ಭಯಾನಕ ವಿಷಯ ಇದೀಗ ಜಗಜ್ಜಾಹೀರಾಗಿದೆ.

ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದ್ದು, ವರದಿಯನ್ವಯ ಇಸಿಸ್ ಉಗ್ರರು ಕೇವಲ ಮಂಚ ಇರುವ ಕೊಠಡಿಗಳಲ್ಲಿ ತಾವು ಖರೀದಿಸಿದ ಈ ಬಾಲಕಿಯರು/ ಮಹಿಳೆಯರನ್ನು ಕೂಡಿಹಾಕಿ  ಇವರ ಮೇಲೆ ಅಚ್ಯಾಚಾರ ನಡೆಸುತ್ತಾರೆ. ಇಂತಹ ನಿರಂತರ ಅತ್ಯಾಚಾರಗಳಿಂದ ಮಹಿಳೆಯರು ಮತ್ತು ಬಾಲಕಿಯರು ಗರ್ಭಿಣಿಯರಾಗುವ ಸಾಧ್ಯತೆಯನ್ನು ತಪ್ಪಿಸಲು ಅವರಿಗೆ ಪ್ರತಿದಿನವೂ  ಬಲವಂತವಾಗಿ ಗರ್ಭ ನಿರೋಧಕ ಗುಳಿಗೆಯನ್ನು ನುಂಗಿಸಲಾಗುತ್ತದೆ ಇಲ್ಲವೇ ಗರ್ಭ ನಿರೋಧಕ ಇಂಜೆಕ್ಷನ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಇನ್ನು ಅಪ್ಪಿ ತಪ್ಪಿ ಬಾಲಕಿಯರು ಅಥವಾ ಮಹಿಳೆಯರು ಗರ್ಭಿಣಿಯರಾದರೆ ಬಲಾತ್ಕಾರವಾಗಿ ಗರ್ಭ ಪಾತ ಮಾಡಿಸಿ ನಂತರ ಮತ್ತೆ ಅತ್ಯಾಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಮತ್ತು ತಮಗೆ  ಸಾಕೆನಿಸಿದಾಗ ಅವರನ್ನು ಬೇರೆಯವರಿಗೆ ಮಾರಲಾಗುತ್ತದೆ. ಅಲ್ಲಿ ಮತ್ತದೇ ಪುನರಾವರ್ತನೆಯಾಗುತ್ತದೆ ಎಂದು ವರದಿಯಲ್ಲಿ  ತಿಳಿಸಲಾಗಿದೆ. ಎರಡು ವರ್ಷಗಳ ಹಿಂದೆ ಧಾರ್ಮಿಕ  ಅಲ್ಪಸಂಖ್ಯಾತ ಯೆಜ್ಡಿ ಸಮುದಾಯದ ಬಾಲಕಿಯರು/ ಮಹಿಳೆಯರನ್ನು ಖರೀದಿಸಿ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡು ನಿರಂತರ ಅತ್ಯಾಚಾರಕ್ಕೆ ಬಳಸಿರುವುದು ಬೆಳಕಿಗೆ ಬಂದಿದೆ.

ಖರೀದಿಸಿದ ದಿನದಿಂದಲೇ ಬಾಲಕಿಯರಿಗೆ ಕಡ್ಡಾಯವಾಗಿ ಗರ್ಭ ನಿರೋಧಕ ಗುಳಿಗೆ ನುಂಗಿಸಲಾಗುತ್ತಿತ್ತು. ಇನ್ನು ಇಸಿಸ್ ಉಗ್ರರು ತಮ್ಮ ಕುಕೃತ್ಯಕ್ಕೆ ಪ್ರವಾದಿ ಮೊಹಮ್ಮದರ ಹೆಸರನ್ನು ಬಳಕೆ  ಮಾಡಿಕೊಳ್ಳುತ್ತಿದ್ದು, ಮೊಹಮ್ಮದರ ಕಾಲದಿಂದಲೇ  "ಲೈಂಗಿಕ ಗುಲಾಮೀ" ಪದ್ಧತಿ ಇತ್ತು. ಗುಲಾಮೀ ಮಹಿಳೆಯನ್ನು ಲೈಂಗಿಕವಾಗಿ ಬಳಸುವಾಗ ಆಕೆ ಗರ್ಭ ಧರಿಸದಂತೆ ನೋಡಿಕೊಳ್ಳಬೇಕು’  ಎಂಬುದಾಗಿ ಮಧ್ಯಯುಗದಲ್ಲಿ ಇತ್ತೆನ್ನಲಾದ ಆದೇಶವನ್ನು ಇಸಿಸ್ ತನ್ನ ಈ ಕೃತ್ಯಕ್ಕೆ ಸಮರ್ಥನೆಯಾಗಿ ಉಲ್ಲೇಖಿಸಿದೆ ಎಂದು ವರದಿ ಹೇಳಿದೆ.

ಇನ್ನು ಇಸಿಸ್ ಉಗ್ರಗಾಮಿಗಳಿಂದ ಅಪಹರಣಗೊಂಡಿದ್ದ 16 ವರ್ಷದ ಯಜಿದಿ ಬಾಲಕಿಯೊಬ್ಬಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತ ಈ ಬಗ್ಗೆ ಮಾತನಾಡಿದ್ದು, ನನ್ನನ್ನು ಕೂಡಿ ಹಾಕಿದ್ದ  ಕೊಠಡಿಯಲ್ಲಿ ಕೇವಲ ಒಂದೇ ಒಂದು ಮಂಚವಿತ್ತು ಅಷ್ಟೇ. ಪ್ರತೀ ದಿನ ರಾತ್ರಿಯಾಗುತ್ತಿದ್ದಂತೆಯೇ ನನ್ನ ಮೇಲೆ ಆತ ನಿರಂತರ ಅತ್ಯಾಚಾರ ಮಾಡುತ್ತಿದ್ದ. ಅತ್ಯಾಚಾರ ಮಾಡುವುದಕ್ಕಾಗಿಯೇ ನನ್ನನ್ನು ಆತ ಆ ಕೊಠಡಿಯಲ್ಲಿ ಹಾಕಿದ್ದ ಎಂದು ಆ ಬಳಿಕ ನನಗೆ ಅರಿವಾಗಿತ್ತು. ಆದರೆ ತಪ್ಪಿಸಿಕೊಳ್ಳಲು ನನಗೆ ಬೇರಾವ ದಾರಿಯೂ ಇಲ್ಲದೇ ಇದ್ದುದರಿಂದ ಅದೇ ನರಕದಲ್ಲಿ ಜೀವನ  ಸಾಗಿಸುತ್ತಿದ್ದೆ. ಪ್ರತಿ ನಿತ್ಯ ನನ್ನ ಮೇಲೆ ಅತ್ಯಾಚಾರ ಮಾಡಿದ ಬಳಿಕ ಆತ ನನಗೆ ಒಂದು ಕೆಂಪು ಬಣ್ಣದ ಮಾತ್ರೆ ನೀಡುತ್ತಿದ್ದ. ಒಂದು ತಿಂಗಳಿಗೆ ಆಗುವಷ್ಟು ಮಾತ್ರೆಗಳ ಡಬ್ಬವನ್ನು ತಂದಿಟ್ಟಿದ್ದ.

ಅದರಲ್ಲಿ ಪ್ರತಿನಿತ್ಯ ಒಂದೊಂದು ಮಾತ್ರೆಗಳನ್ನು ನಾನು ಆತನ ಮುಂದೆಯೇ ತೆಗೆದುಕೊಳ್ಳಬೇಕಿತ್ತು. ಮಾತ್ರೆಗೆ ನಾನು ನಿರಾಕರಿಸಿದರೆ ಆತ ಬಲವಂತವಾಗಿ ನುಂಗಿಸುತ್ತಿದ್ದ. ಅದಕ್ಕೂ  ಜಗ್ಗಲಿಲ್ಲವೆಂದರೆ ಇಂಜೆಕ್ಷನ್ ನೀಡುತ್ತಿದ್ದ. ಒಮ್ಮೆ ನನ್ನನ್ನು ಆತ ಮತ್ತೊಬ್ಬನಿಗೆ ಮಾರಿದಾಗ ಆ ಮಾತ್ರೆಗಳ ಡಬ್ಬವನ್ನೂ ಕೂಡ ನನ್ನೊಂದಿಗೆ ತೆಗೆದುಕೊಂಡು ಹೋಗಬೇಕಿತ್ತು. ಹೀಗೆ ಕೆಲವು  ತಿಂಗಳ ಕಳೆದ ಬಳಿಕ ಈ ಮಾತ್ರಗಳು ಗರ್ಭನಿರೋಧಕ್ಕಾಗಿ ಬಳಕೆ ಮಾಡುವ ಮಾತ್ರೆಗಳು ಎಂದು ತಿಳಿಯಿತು ಎಂದು ಬಾಲಕಿ ತನ್ನ ವಿದ್ರಾವಕ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com