
ಮಧ್ಯಪ್ರಾಚ್ಯ: ಯೆಮೆನ್ ರಾಜಧಾನಿ ಅಡೆನ್ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಯೆಮೆನ್ ದೇಶದ ಆಂತರಿಕ ಬಿಕ್ಕಟ್ಟು ತಾರಕ್ಕೇರಿದ್ದು ನಿನ್ನೆ ರಾತ್ರಿ ಪ್ರತ್ಯೇಕತಾವಾದಿಗಳು ಸಿಡಿಸಿದ 3 ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಎಡೆನ್ನ ಬುರೈಗಾದಲ್ಲಿರುವ 100ಕ್ಕೂ ಹೆಚ್ಚು ಸೈನಿಕರಿದ್ದ ಮಿಲಿಟರಿ ಕೇಂದ್ರವನ್ನು ಗುರಿಯಾಗಿಸಿಕೊಂಡು ಇಬ್ಬರು ಆತ್ಮಾಹುತಿ ಬಾಂಬರ್ ಗಳು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಅಡೆನ್ ನಲ್ಲಿರುವ ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆ್ಯಂಬುಲೆನ್ಸ್ ನಲ್ಲಿ ಬಂದ ಓರ್ವ ಆತ್ಮಹತ್ಯಾ ಬಾಂಬರ್ ಯೆಮೆನ್ ಮಿಲಿಟರಿ ಕೇಂದ್ರದ ಸಮೀಪಕ್ಕೆ ಬಂದು ಸ್ಫೋಟಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಗಾಯಗೊಂಡ ಗಾಯಾಳುಗಳನ್ನು ಸೇನಾಕೇಂದ್ರಕ್ಕೆ ಸಾಗಿಸುತ್ತಿದ್ದಾಗ ಅದೇ ನೆಪದಲ್ಲಿ ಬಂದ ಮತ್ತಿಬ್ಬರು ಆತ್ಮಹತ್ಯಾ ಬಾಂಬರ್ ಗಳು ಸೇನಾ ಕೇಂದ್ರದ ಒಳಗೆ ತಮ್ಮನ್ನು ತಾವು ಸ್ಫೋಟಿಸಿಕೊಳ್ಳವ ಮೂಲಕ ಸಾವಿನ ಸಂಖ್ಯೆ ಹೆಚ್ಚಾಗುವಂತೆ ಮಾಡಿದ್ದಾರೆ.
ತಿಂಗಳ ಹಿಂದೆಯಷ್ಟೇ ಅಡೆನ್ನ ಮಾಜಿ ರಾಜ್ಯಪಾಲ ಸೇರಿದಂತೆ ಹಲವಾರು ಉನ್ನತ ಶ್ರೇಣಿಯ ಭದ್ರತಾ ಅಧಿಕಾರಿಗಳನ್ನು ಹಾಗೂ ನ್ಯಾಯಾಧೀಶರನ್ನು ಹತ್ಯೆಗೈಯ್ಯಲಾಗಿತ್ತು. ಬೆಂಗಳೂರಿನ ಪಾದ್ರಿ ಡಾ.ಟಾಮ್ ರನ್ನು ಕೂಡ ಉಗ್ರರು ಅಪಹರಿಸಿದ್ದು ಇದೇ ಬುರೈಗಾ ನಗರದಿಂದಲೇ. ಮಾರ್ಚ್ 4ರಂದು ಡಾ.ಟಾಮ್ ಕಾರ್ಯನಿರ್ವಹಿಸುತ್ತಿದ್ದ ಮಿಷನರಿ ಮೇಲೆ ದಾಳಿ ನಡೆಸಿದ ಬಂಧೂಕುಧಾರಿಗಳು ಟಾಮ್ ರನ್ನು ಅಪಹರಿಸಿದ್ದಾರೆ ಎನ್ನಲಾಗುತ್ತಿದೆ.
Advertisement