
ಇಸ್ಲಾಮಾಬಾದ್: ಎಫ್–16 ಯುದ್ಧ ವಿಮಾನಗಳ ಖರೀದಿಗೆ ಅಮೆರಿಕ ವಿಧಿಸಿರುವ ಷರತ್ತುಗಳನ್ನು ಪಾಕಿಸ್ತಾನ ತಿರಸ್ಕರಿಸಿದ್ದು, ಎಫ್-16 ಪೂರೈಕೆಗೆ ಸಬ್ಸಿಡಿ ನೀಡದೆ ಹೋದಲ್ಲಿ, ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟಕ್ಕೆ ಬೇರೆಯ ಯುದ್ಧ ವಿಮಾನಗಳನ್ನು ಖರೀದಿಸುವ ಚಿಂತನೆ ನಡೆಸಲಾಗುವುದು ಎಂದು ಹೇಳಿದೆ.
ಪತ್ರಕರ್ತರೊಂದಿಗೆ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ, ಎಫ್-16 ಯುದ್ಧ ವಿಮಾನ ಪೂರೈಕೆಗೆ ಅಮೆರಿಕ ವಿಧಿಸಿರುವ ಷರತ್ತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಷರತ್ತುಗಳನ್ನು ತಿರಸ್ಕರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಫ್-16 ಮಾದರಿಯ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಬಳಕೆ ಮಾಡಲಿರುವ ಹಿನ್ನೆಲೆಯಲ್ಲಿ ಅಮೆರಿಕ ಯುದ್ಧ ವಿಮಾನಗಳ ಪೂರೈಕೆಗೆ ಷರತ್ತುಗಳನ್ನು ವಿಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ಚೌಧರಿ, ಸಬ್ಸಿಡಿ ರಹಿತವಾಗಿ ಯುದ್ಧ ವಿಮಾನಗಳನ್ನು ಖರೀದಿಸುವಷ್ತು ಹಣ ಪಾಕಿಸ್ತಾನದ ಬಳಿ ಇಲ್ಲ. ಆದ್ದರಿಂದ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ತನ್ನಲ್ಲಿರುವ ಹಣಕ್ಕೆ ಹೊಂದುವಂತಹ ಬೇರೆ ಮಾದರಿಯ ಯುದ್ಧ ವಿಮಾನಗಳನ್ನು ಖರೀದಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಹಕ್ಕಾನಿ ಉಗ್ರ ಜಾಲದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸದೆ ಇದ್ದ ಹಿನ್ನೆಲೆಯಲ್ಲಿ ಪಾಕ್ ಗೆ ನೀಡಬೇಕಿದ್ದ ನೆರವಿಗೆ ಅಮೆರಿಕ ಕತ್ತರಿ ಹಾಕಿತ್ತು ಅಲ್ಲದೇ, ಕೆಲವು ಸೆನೆಟರ್‌ಗಳು ವಿದೇಶಿ ಸೇನೆಗೆ ಹಣಕಾಸು ನೆರವು (ಎಫ್‌ಎಂಎಫ್) ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಸಬ್ಸಿಡಿಗೂ ಕತ್ತರಿ ಹಾಕಿದ್ದ ಅಮೆರಿಕ ಪಾಕ್ ತನ್ನ ರಾಷ್ಟ್ರೀಯ ನಿಧಿಯನ್ನು ಬಳಸಿ ಪೂರ್ತಿ ಮೊತ್ತವನ್ನು ಪಾವತಿಸಬೇಕು ಎಂದು ಸ್ಪಷ್ಟಪಡಿಸಿತ್ತು.
Advertisement