

ವಾಷಿಂಗ್ಟನ್: ಇಡೀ ವಿಶ್ವದ ಬಲಿಷ್ಠ ಮಿಲಿಟರಿ ದೇಶಗಳ ನಿದ್ದೆಗೆಡಿಸಿರುವ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಇದೀಗ ತನ್ನ ಲೈಂಗಿಕ ಗುಲಾಮ ಮಹಿಳೆಯರನ್ನು ಆನ್ ಲೈನ್ ಮಾರಾಟಕ್ಕೆ ಇಟ್ಟಿದೆ.
ಅಮೆರಿಕ ಖ್ಯಾತ ಆಂಗ್ಲ ಧೈನಿಕ ವಾಷಿಂಗ್ ಟನ್ ಪೋಸ್ಟ್ ವರದಿ ಮಾಡಿರುವಂತೆ ಫೇಸ್ ಬುಕ್ ಖಾತೆಯೊಂದರಲ್ಲಿ ಯಜಿದಿ ಯುವತಿಯೊಬ್ಬಳ ಫೋಟೋ ಹಾಕಿರುವ ಇಸಿಸ್ ಆಕೆ ಮಾರಾಟಕ್ಕಿದ್ದಾಳೆ ಎಂದು ಫೋಟೋ ಅಡಿ ಟಿಪ್ಪಣಿ ನೀಡಿದೆ. ಅಲ್ಲದೆ ಈ ಫೋಟೊಗೆ ಸಂಬಂಧಿಸಿದಂತೆ ವಿವರಣೆ ನೀಡಿರುವ ಇಸಿಸ್, ಲೈಂಗಿಕ ಗುಲಾಮ ಯುವತಿಯರ ಖರೀದಿಸಲು ಕಾದಿದ್ದವರಿಗೆ ಇಲ್ಲೊಬ್ಬಾಕೆ ಇದ್ದಾಳೆ. ಈಕೆ 18 ವರ್ಷದ ವರ್ಜಿನ್ ಯುವತಿಯಾಗಿದ್ದು, ಈಕೆಯ ಬೆಲೆ 8 ಸಾವಿರ ಅಮೆರಿಕನ್ ಡಾಲರ್ ಎಂದು ಹೇಳಿದೆ.
ಮೂಲಗಳ ಪ್ರಕಾರ ಅಸದ್ ಅಲ್ಮಾನಿ ಎಂಬ ಇಸಿಸ್ ಉಗ್ರಗಾಮಿ ಸಂಘಟನೆಯ ಬೆಂಬಲಿಗ ಅಬು ಅಸ್ಸದ್ ಅಲ್ಮಾನಿ ಎಂಬಾತ ಈ ಪೋಸ್ಟ್ ಅನ್ನು ಹಾಕಿದ್ದು, ಈ ಪೋಸ್ಟ್ ಹಾಕಿದ ಕೆಲ ಹೊತ್ತಿನ ನಂತರ ಮತ್ತೊಬ್ಬ ಯುವತಿಯ ಫೋಟೋ ಹಾಕಿ ಈಕೆಯ ಬೆಲೆ ಕೂಡ 8 ಸಾವಿರ ಡಾಲರ್ ಎಂದು ಹೇಳಿದ್ದಾನೆ. ಈ ಹಿಂದೆಯೂ ಕೂಡ ಇಂತಹುದೇ ಸಾಕಷ್ಟು ವಿವಾದಾತ್ಮಕ ಇಸಿಸ್ ಪರ ಪೋಸ್ಟ್ ಗಳನ್ನು ಹಾಕುತ್ತಿದ್ದ ಅಲ್ಮಾನಿ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದು, ಆತ ಬಹುಶಃ ಇಸಿಸ್ ವಶದಲ್ಲಿರುವ ರಾಖಾ ನಗರದಿಂದ ಖಾತೆ ನಿರ್ವಹಣೆ ಮಾಡುತ್ತಿರಬಹುದು ಎಂದು ಶಂಕಿಸಿದ್ದಾರೆ.
ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಈ ಪೋಸ್ಚ್ ಡಿಲೀಟ್ ಆಗಿದ್ದು, ಫೇಸ್ ಬುಕ್ ಖಾತೆದಾರರನೇ ಡಿಲೀಟ್ ಮಾಡಿದ್ದಾನೆಯೇ ಅಥವಾ ಫೇಸ್ ಬುಕ್ ನಿರ್ವಹಣಾ ಸಿಬ್ಬಂದಿ ತೆಗೆದುಹಾಕಿದ್ದಾರೆಯೇ ಎಂಬುದು ಪತ್ತೆಯಾಗಿಲ್ಲ. ಆದರೆ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement