
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಭಾರತ ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ನಡುವೆ ಮಾಡಿಕೊಂಡಿರುವ ತ್ರಿಪಕ್ಷೀಯ ಒಪ್ಪಂದ ಪಾಕಿಸ್ತಾನದ ರಕ್ಷಣಾ ತಜ್ಞರಿಗೆ ತೀವ್ರ ತಲೆನೋವು ತಂದೊಡ್ಡಿದ್ದು, ಭಾರತದ ನಿಲುವು ಪಾಕಿಸ್ತಾನದ ಭದ್ರತೆಗೆ ಸವಾಲಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಚಬಾಹರ್ ಬಂದರು ಅಭಿವೃದ್ಧಿಗೆ ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್ ಮಧ್ಯೆ ನಡೆದಿರುವ ತ್ರಿಪಕ್ಷೀಯ ಒಪ್ಪಂದ ಪಾಕಿಸ್ತಾನದ ಭದ್ರತೆಗೆ ಸವಾಲು ತಂದೊಡ್ಡಲಿದೆ ಎಂದು ಪಾಕ್ ರಕ್ಷಣಾ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ ಪಾಕಿಸ್ತಾನದ ಚಿಂತಕರ ಛಾವಡಿ ಸ್ಟ್ರಾಟೆಜಿಕ್ ವಿಷನ್ ಇನ್ಸ್ ಟಿಟ್ಯೂಟ್ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ "ದಕ್ಷಿಣ ಏಷ್ಯಾದಲ್ಲಿ ರಾಷ್ಟ್ರೀಯ ಭದ್ರತಾ, ಧಾಳಿನಿರೋಧಕ ಮತ್ತು ಪ್ರಾದೇಶಿಕ ಸ್ಥಿರತೆ" ವಿಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಪಾಕಿಸ್ತಾನದ ಇಬ್ಬರು ನಿವೃತ್ತ ಮಾಜಿ ಲೆಫ್ಟಿನೆಂಟ್ ಜನರಲ್ ಗಳು ಕೂಡ ಭಾಗವಹಿಸಿದ್ದರು. ಈ ವೇಳೆ ಭಾರತದ ಚಬಾಹರ್ ಒಪ್ಪಂದದ ಕುರಿತು ಚರ್ಚೆಯಾಗಿದ್ದು, "ಪಾಕಿಸ್ತಾನ ಒಂಟಿಯಾಗಿ ಪ್ರಪಾತಕ್ಕೆ ಬೀಳುವುದನ್ನು ತಪ್ಪಿಸಲು ರಾಜತಾಂತ್ರಿಕ ಕುಶಲತೆ ಬಳಸಬೇಕು" ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಪಾಕಿಸ್ತಾನದ ಮಾಜಿ ರಕ್ಷಣಾ ಕಾರ್ಯದರ್ಶಿ ಆಸೀಫ್ ಯಾಸೀನ್ ಮಲ್ಲಿಕ್ ಅವರು, ‘ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್ ಮಧ್ಯೆ ನಡೆದ ಒಪ್ಪಂದ ಪಾಕ್ ಭದ್ರತೆ ಸವಾಲು ತಂದೊಡ್ಡಿದ್ದು, ಪಾಕಿಸ್ತಾನ ಒಂಟಿಯಾಗುವ ಆತಂಕ ಎದುರಾಗಿದೆ. ತಾನು ಮಾಡಿಕೊಂಡ ತಪ್ಪುಗಳಿಂದ ಪಾಕಿಸ್ತಾನ ಪ್ರಪಾತಕ್ಕೆ ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಪಾಕಿಸ್ತಾನ ವಿದೇಶಾಂಗ ಕಚೇರಿಯ ಕಾರ್ಯಕ್ಷಮತೆಯನ್ನು ಟೀಕಿಸಿರುವ ಅವರು, ಪ್ರಸ್ತುತ ಪರಿಸ್ಥಿತಿ ರಾಯಭಾರ ಕಚೇರಿಯ ಅಸಮರ್ಥತೆಯೇ ಕಾರಣ ಎಂದು ಟೀಕಿಸಿದ್ದಾರೆ. ಇನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ನದೀಮ್ ಲೋದಿ ಅವರು ಮಾತನಾಡಿ, ಭಾರತದ ನಡೆ ಪಾಕಿಸ್ತಾನದ ಪ್ರಾದೇಶಿಕ ಆರ್ಥಿಕ ಏಕೀಕರಣ, ಆಂತರಿಕ ಶಾಂತಿ ಮತ್ತು ಶಾಂತಿಯುತ ಗಡಿ ನಿರ್ವಹಣಾ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಪಾಕಿಸ್ತಾನ ತನ್ನ ಕಠಿಣ ವಿದೇಶಾಂಗ ನೀತಿಗಳಿಂದಾಗಿ ತನ್ನ ಗುಂಡಿಯನ್ನು ತಾನೇ ತೋಡಿ ಕೊಳ್ಳುತ್ತಿದ್ದು, ಯಾವಾಗ ಬೇಕಾದರೂ ಆ ಗುಂಡಿಯಲ್ಲಿ ಪಾಕಿಸ್ತಾನ ಬೀಳಬಹುದು ಎಂದು ಆದೇಶದ ಚಿಂತಕರ ಛಾವಡಿ ಅಭಿಪ್ರಾಯಪಟ್ಟಿದೆ.
Advertisement