ಲಂಡನ್: ದಕ್ಷಿಣ ಲಂಡನ್ ನಲ್ಲಿ ಟ್ರಾಮ್ ವೊಂದು ಹಳಿ ತಪ್ಪಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಗಾಯಗೊಂಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಾಯ್ಡನ್ ನಲ್ಲಿ ಅಪಘಾತ ಸಂಭವಿಸಿದ ಆರು ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಷಗಳಡಿ ಸಿಲುಕಿರುವ ಇನ್ನೂ ಇಬ್ಬರನ್ನು ಹೊರ ತೆಗೆಯಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಟ್ರಾಮ್ ಚಾಲಕನ್ನು ಬಂಧಿಸಲಾಗಿದ್ದು, ಹಳಿ ತಪ್ಪಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬ್ರಿಟಿಷ್ ಸಾರಿಗೆ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಬ್ರಿಟಿಷ್ ರಾಜಧಾನಿ ಮಾತ್ರ ಈ ಟ್ರಾಮ್ (ಹಳಿಗಳ ಮೇಲೆ ಸಂಚರಿಸುವ ಬಸ್) ಸಾರಿಗೆಯನ್ನು ಹೊಂದಿದ್ದು, ದಕ್ಷಿಣ ಲಂಡನ್ ನಲ್ಲಿ ಕಳೆ ವರ್ಷ ಆರಂಭಗೊಂಡಿರುವ ಟ್ರಾಮ್ ಸುಮಾರು 27 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ.