
ಲಾಸ್ ವೇಗಾಸ್: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಎದುರಾಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈಗೊಂಬೆ ಎಂದು ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಟೀಕೆ ಮಾಡಿದ್ದಾರೆ.
ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚನಾವಣೆಯ ಅಭ್ಯರ್ಥಿಗಳ ಕೊನೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹಿಲರಿ ಕ್ಲಿಂಟನ್, ಡೊನಾಲ್ಡ್ ಟ್ರಂಪ್ ಅವರು ವ್ಲಾಡಿಮಿರ್ ಪುಟಿನ್ ಅವರ ಕೈಗೊಂಬೆಯಾಗಿದ್ದಾರೆ. ಟ್ರಂಪ್ ಅವರು ರಷ್ಯಾ ಅಧ್ಯಕ್ಷರ ನೀತಿಗಳನ್ನು ಟೀಕಿಸಲು ನಿರಾಕರಿಸುತ್ತಿದ್ದು, ರಷ್ಯಾ ನಡೆಸುತ್ತಿರುವ ಸೈಬರ್ ದಾಳಿಗಳನ್ನೂ ಕೂಡ ಅವರು ಟೀಕಿಸುತ್ತಿಲ್ಲ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಬಹುಶಃ ಅವರು ಪುಟಿನ್ ಅವರ ಕೈಗೊಂಬೆಯಾಗಿರಬಹುದು ಎಂದು ಆರೋಪಿಸಿದ್ದಾರೆ.
ಅಂತೆಯೇ ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕದ ಗುಪ್ತಚರ ಇಲಾಖೆ ಹಾಗೂ ಸೇನೆಯ ಮೇಲೆ ನಂಬಿಕೆಯೇ ಇಲ್ಲ. ಅವರಿಗಿಂತ ಟ್ರಂಪ್ ಗೆ ಪುಟಿನ್ ಮೇಲೆಯೇ ನಂಬಿಕೆ ಹೆಚ್ಚು ಎಂದು ಹಿಲರಿ ಟೀಕಿಸಿದ್ದಾರೆ.
ಆರೋಪ ನಿರಾಕರಿಸಿದ ಟ್ರಂಪ್
ಇದೇ ವೇಳೆ ಹಿಲರಿ ಆರೋಪವನ್ನು ಸಾರಸಗಟಾಗಿ ನಿರಾಕರಿಸಿದ ಡೊನಾಲ್ಡ್ ಟ್ರಂಪ್, ನಾನು ಪುಟಿನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇನೆ ಎನ್ನುವುದು ನಿಜ. ಹಾಗಂತ ನಾನೇನು ಅವರ ಕೈಗೊಂಬೆಯಲ್ಲ. ನಮ್ಮ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ಬಾಂಧವ್ಯ ಉತ್ತಮವಾಗಿರಬೇಕು ಎನ್ನುವುದು ನಮ್ಮ ಭಾವನೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿರುವ ಈ ಚರ್ಚೆಯಲ್ಲಿ ಕ್ಲಿಂಟನ್ ಹಾಗೂ ಟ್ರಂಪ್ ತಮ್ಮ ನೀತಿಗಳ ಕುರಿತು ಚರ್ಚೆ ನಡೆಸಿದರು. ಸಮಾಜ ಘಾತುಕ ಶಕ್ತಿಗಳು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಹತ್ಯೆ ನಡೆಸುತ್ತಿರುವುದನ್ನು ತಡೆಯಬೇಕಾದ ಅವಶ್ಯಕತೆ ಇದೆ. ಪ್ರತೀ ವರ್ಷ ಅಮೆರಿಕದಲ್ಲಿ ಗುಂಡಿನ ದಾಳಿಯಿಂದಾಗಿ ಸುಮಾರು 33 ಸಾವಿರ ಜನರು ಮೃತಪಡುತ್ತಿದ್ದಾರೆ ಎಂದು ಹಿಲರಿ ವಾದಿಸಿದರೆ, ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹೊಂದುವ ಅವಕಾಶ ನೀಡಬೇಕು. ಭದ್ರತಾ ಹಿತದೃಷ್ಟಿಯಿಂದು ಒಳ್ಳೆಯದು ಎಂದು ಟ್ರಂಪ್ ವಾದಿಸಿದರು.
Advertisement