
ಮೊಸುಲ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾಕ್ ನ ಮೊಸುಲ್ ನಗರದಲ್ಲಿ ಪಾರಮ್ಯ ಮೆರೆಯುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಇಡೀ ಸಲ್ಫರ್ ಮೈನಿಂಗ್ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೊಸುಲ್ ನಗರದಲ್ಲಿ ಪ್ರಬಲವಾಗಿ ದಾಳಿ ನಡೆಸುತ್ತಿರುವ ಅಮೆರಿಕದ ಮಿತ್ರಪಡೆಗಳ ಸಾಮರ್ಥ್ಯವನ್ನು ಕುಗ್ಗಿಸುವ ಸಲುವಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಲ್ಫರ್ ಮೈನಿಂಗ್ ಗೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾ ಸುತ್ತಮುತ್ತಲಿನ ಸುಮಾರು 6 ಕಿ.ಮೀ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಸಲ್ಫರ್ ಸುಟ್ಟ ಹೊಗೆಯಿಂದಾಗಿ ಉಸಿರಾಡಲೂ ಕಷ್ಟಕರವಾದ ಪರಿಸ್ಥಿತಿ ಯೋಧರಿಗೆ ಎದುರಾಗಿದೆ. ಪ್ರಸ್ತುತ ತಮ್ಮನ್ನು ತಾವು ವಿಷಕಾರಿ ಅನಿಲದಿಂದ ತಪ್ಪಿಸಿಕೊಳ್ಳಲು ಯೋಧರು ಮಾಸ್ಕ್ ಹಾಗೂ ಆ್ಯಂಟಿ ಸ್ಮೋಕ್ ಹೆಲ್ಮೆಟ್ ಗಳನ್ನು ಧರಿಸಿ ಯುದ್ಧ ಮಾಡುತ್ತಿದ್ದಾರೆ.
ಶನಿವಾರ ಸಂಜೆ ವೇಳೆಗೆ ಅಮೆರಿಕದ ಮಿತ್ರ ಪಡೆಗಳು ಮೊಸಲ್ ನಗರವನ್ನು ಸುತ್ತುವರೆಯುತ್ತಿದ್ದಂತೆಯೇ ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಮಿಶ್ರಾಖ್ ಸಲ್ಫರ್ ಮೈನಿಂಗ್ ಗೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿದ್ದ ಇಂಧನ ಟ್ಯಾಂಕ್ ಗಳಿಗೆ ಬೆಂಕಿ ಇಟ್ಟು, ಬಾಂಬ್ ಗಳನ್ನು ಸ್ಫೋಟಿಸಿರುವ ಉಗ್ರರು, ಗೋದಾಮಿಗೂ ಬೆಂಕಿ ಇಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅಮೆರಿಕ ನೇತೃತ್ವದ ಮಿತ್ರಪಡೆಗಳ ಡ್ರೋಣ್ ದಾಳಿ ಮುಂದುವರೆದಿದ್ದು, ದಾಳಿಯಿಂದ ಕಂಗೆಟ್ಟಿರುವ ಉಗ್ರರು ಸೈನಿಕರನ್ನು ಹಿಮ್ಮೆಟ್ಟಿಸುವ ಸಲುವಾಗಿ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement