ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ತರಬೇತಿ ನಿರತ 60 ಪೊಲೀಸರ ಹತ್ಯೆ

ಬಲೂಚಿಸ್ತಾನದಲ್ಲಿ ಉಗ್ರರು ಅಟ್ಟಹಾಸವನ್ನು ಮೆರೆದಿದ್ದು, ಸುಮಾರು 60 ಕ್ಕೂ ಹೆಚ್ಚು ತರಬೇತಿ ನಿರತ ಪೊಲೀಸರನ್ನು ಬಲಿಪಡೆದುಕೊಂಡಿದ್ದಾರೆಂದು ಮಂಗಳವಾರ...
ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ತರಬೇತಿ ನಿರತ 60 ಪೊಲೀಸರ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ತರಬೇತಿ ನಿರತ 60 ಪೊಲೀಸರ ಹತ್ಯೆ

ಖ್ವೆಟ್ಟಾ: ಬಲೂಚಿಸ್ತಾನದಲ್ಲಿ ಉಗ್ರರು ಅಟ್ಟಹಾಸವನ್ನು ಮೆರೆದಿದ್ದು, ಸುಮಾರು 60ಕ್ಕೂ ಹೆಚ್ಚು ತರಬೇತಿ ನಿರತ ಪೊಲೀಸರನ್ನು ಬಲಿಪಡೆದುಕೊಂಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.

ಕಳೆದ ರಾತ್ರಿ 11.15ರ ಸುಮಾರಿಗೆ 4 ರಿಂದ 6 ಮಂದಿಯಿದ್ದ ಉಗ್ರರ ಗುಂಪೊಂದು ಖ್ವೆಟ್ಟಾದ ಪೊಲೀಸ್ ತರಬೇತಿ ಶಾಲೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಏಕಾಏಕಿ ಪೊಲೀಸರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ 60 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

ದಾಳಿಯಲ್ಲಿ 106ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಉಗ್ರರಿಗಾಗಿ ಪಾಕಿಸ್ತಾನ ಸೇನೆ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪಾಕಿಸ್ತಾನ ಸೇನೆ ಹಾಗೂ ಉಗ್ರರ ನಡುವೆ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ವಕ್ತಾರರು ಮಾಹಿತಿ ನೀಡಿದ್ದಾರೆ.

ಕೊಠಡಿಗಳಲ್ಲಿ 250 ಕ್ಕೂ ಹೆಚ್ಚು ಪೊಲೀಸರಿದ್ದರು. ಮತ್ತಷ್ಟು ಪೊಲೀಸರನ್ನು ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದಾರೆ. ಇದೀಗ ಪಾಕಿಸ್ತಾನ ಸೇನೆ ತರಬೇತಿ ಶಾಲೆಯನ್ನು ಸುತ್ತುವರೆದಿದ್ದು, ಉಗ್ರರನ್ನು ಮಟ್ಟ ಹಾಕಲು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೇನೆ ಇದೀಗ ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.  

ಉಗ್ರರ ದಾಳಿ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ಗೃಹ ಸಚಿವ ಸರ್ಫಾರಾಜ್ ಬುಗ್ತಿ ಅವರು, ಪಾಕಿಸ್ತಾನ ಸೇನೆ ಇದೀಗ ಓರ್ವ ಉಗ್ರನನ್ನು ಹತ್ಯೆ ಮಾಡಿದೆ. ಇಬ್ಬರು ಉಗ್ರರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ. ಮತ್ತಷ್ಟು ಉಗ್ರರು ಅಡಗಿರುವ ಶಂಕೆಗಳಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಾಲ್ಕು ಮಂದಿಯಿದ್ದ ಉಗ್ರರ ಗುಂಪು ಪೊಲೀಸ್ ತರಬೇತಿ ಶಾಲೆಯ ಮೇಲೆ ದಾಳಿ ಮಾಡಿತ್ತು. ಹಾಸ್ಟೆಲ್ ಬಳಿಯಿದ್ದ ಭದ್ರತಾ ಸಿಬ್ಬಂದಿಯ ಬಳಿ ಗನ್ ಗಳನ್ನು ಕಿತ್ತುಕೊಂಡು ಹಾಸ್ಟೆಲ್ ಪ್ರವೇಶ ಮಾಡಿದ್ದಾರೆ. ಇದೀಹ ಹಾಸ್ಟೆಲ್ ಸುತ್ತಲೂ ಸೇನಾ ಪಡೆ ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿರುವುದಾಗಿ ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com