ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸಿದ ಡೊನಾಲ್ಡ್ ಟ್ರಂಪ್ ಸೊಸೆ!

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸೊಸೆ ಲಾರಾ ಟ್ರಂಪ್ ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸುವ ಮೂಲಕ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹಾಗೂ ಅವರ ಪುತ್ರ ಎರಿಕ್ ಹಾಗೂ ಸೊಸೆ ಲಾರಾ ಟ್ರಂಪ್ (ಸಂಗ್ರಹ ಚಿತ್ರ)
ಡೊನಾಲ್ಡ್ ಟ್ರಂಪ್ ಹಾಗೂ ಅವರ ಪುತ್ರ ಎರಿಕ್ ಹಾಗೂ ಸೊಸೆ ಲಾರಾ ಟ್ರಂಪ್ (ಸಂಗ್ರಹ ಚಿತ್ರ)

ವರ್ಜೀನಿಯಾ: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸೊಸೆ ಲಾರಾ ಟ್ರಂಪ್ ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸುವ ಮೂಲಕ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ ಮಾವ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ನೀಡಿ ಪ್ರಚಾರ ನಡೆಸುತ್ತಿರುವ ಲಾರಾ ಟ್ರಂಪ್ ಅವರು, ಭಾರತೀಯ ಮತದಾರರ ಸೆಳೆಯಲು ಪ್ರಯತ್ನಿಸಿದ್ದು, ವರ್ಜೀನಿಯಾದಲ್ಲಿರುವ ಹಿಂದೂ ದೇವಾಲಯಕ್ಕೆ ತೆರಳಿ ಅಲ್ಲಿರುವ ಭಾರತೀಯ ಮೂಲದವರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಾರಾ, ವೈಯಕ್ತಿಕವಾಗಿ ನನಗೆ ಹಿಂದೂ ಸಂಸ್ಕೃತಿ ಎಂದರೆ ತುಂಬಾ ಪ್ರೀತಿ ಮತ್ತು ಗೌರವ. ಭಾರತೀಯರೊಂದಿಗೆ ಸೇರಿ ಹಬ್ಬ ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ಮಾವ ಟ್ರಂಪ್ ಅಧ್ಯಕ್ಷರಾಗುವ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ಬಾಂಧ್ಯವ್ಯ ಎತ್ತರಕ್ಕೆ ಹೋಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಮಾತನಾಡಿದ ಭಾರತ ಮೂಲದವರ ಒಕ್ಕೂಟದ ಸದಸ್ಯ ರಾಜೇಶ್ ಗೂಟಿ, ಲಾರಾ ಟ್ರಂಪ್ ಅವರ ಆಗಮನದಿಂದ ನಮಗೆ ಒಂದು ವಾರ ಮೊದಲೇ ದೀಪಾವಳಿ ಬಂದಂತಾಗಿದೆ. ಅವರೊಂದಿಗೆ ಸೇರಿ ಹಬ್ಬ ಆಚರಿಸುತ್ತಿರುವುದು ತುಂಬ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುತೂಹಲಕಾರಿ ಘಟ್ಟದಲ್ಲಿದ್ದು, ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿಯೇ  ದೀಪಾವಳಿ ಹಬ್ಬ ಆಗಮಿಸಿದ್ದು, ಭಾರತೀಯರೊಂದಿಗೆ ಹಬ್ಬದ ಆಚರಣೆ ಮಾಡುವ ಮೂಲಕ ಲಾರಾ ಅವರು ಟ್ರಂಪ್ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಈ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ಹಿಂದೂಗಳನ್ನು ಕಂಡರೆ ತಮಗೆ ತುಂಬಾ ಪ್ರೀತಿ ಎಂದು ಹೇಳಿದ್ದರು. ಬಳಿಕ ತಮ್ಮ ಮಾತನ್ನ ಬದಲಿಸಿದ್ದ ಟ್ರಂಪ್, ಭಾರತೀಯರನ್ನು ಕಂಡರೆ ಪ್ರೀತಿ ಎಂದು ಮಾತು ಬದಲಿಸಿದ್ದರು. ಆ ಮೂಲಕ ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಟ್ರಂಪ್ ಹಾಗೂ ಅವರ ಕುಟುಂಬ ಪ್ರಯತ್ನಿಸುತ್ತಿದೆ ಎಂದು  ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com