ಪಾಕಿಸ್ತಾನಕ್ಕೆ 'ಭಯೋತ್ಪಾದಕ ರಾಷ್ಟ್ರ'ದ ಹಣೆಪಟ್ಟಿ ಕಟ್ಟುವ ಮಸೂದೆ ಮಂಡಿಸಿದ ಅಮೆರಿಕ

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಸಂಕಷ್ಟ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ.
ಪಾಕಿಸ್ತಾನಕ್ಕೆ 'ಉಗ್ರವಾದ ಉತ್ತೇಜಕ ರಾಷ್ಟ್ರ'ದ ಹಣೆಪಟ್ಟಿ ಕಟ್ಟುವ ಮಸೂದೆ ಅಮೆರಿಕಾದಲ್ಲಿ ಮಂಡನೆ
ಪಾಕಿಸ್ತಾನಕ್ಕೆ 'ಉಗ್ರವಾದ ಉತ್ತೇಜಕ ರಾಷ್ಟ್ರ'ದ ಹಣೆಪಟ್ಟಿ ಕಟ್ಟುವ ಮಸೂದೆ ಅಮೆರಿಕಾದಲ್ಲಿ ಮಂಡನೆ

ವಾಷಿಂಗ್ ಟನ್: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಸಂಕಷ್ಟ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ. ಉರಿ ದಾಳಿ ಹಿನ್ನೆಲೆಯಲ್ಲಿ ಭಾರತದ ಮನವಿ ಮೇರೆಗೆ ರಷ್ಯಾ ಪಾಕಿಸ್ತಾನದೊಂದಿಗೆ ನಿಗದಿಯಾಗಿದ್ದ ಜಂಟಿ ಸೇನಾ ತಾಲೀಮನ್ನು ರದ್ದುಗೊಳಿಸಿದ ಬೆನ್ನಲ್ಲೇ ಅಮೆರಿಕ ಸಹ ಭಾರತದ ಬೆಂಬಲಕ್ಕೆ ನಿಂತಿದೆ.

ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರ ಉಂಟಾಗುವ ಸ್ಪಷ್ಟ ಸೂಚನೆ ಸಿಗುತ್ತಿದ್ದು, ಅಮೆರಿಕದ ಪ್ರಮುಖ ಸಂಸದರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆ ಉತ್ತೇಜಕ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟುವ ಮಸೂದೆಯನ್ನು ಮಂಡಿಸಿದ್ದಾರೆ.
" ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದ ವಿಚಾರದಲ್ಲಿ ಜಾಗತಿಕ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡಿದೆ. ಆದ್ದರಿಂದ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ" ಎಂದು ಭಯೋತ್ಪಾದನೆ ನಿಗ್ರಹ ಸಮಿತಿಯ ಅಧ್ಯಕ್ಷರೂ ಆಗಿರುವ ಅಮೆರಿಕ ಸಂಸದ ಟೆಡ್ ಪೋ ತಿಳಿಸಿದ್ದಾರೆ.

ಪಾಕಿಸ್ತಾನವನ್ನು ನಂಬಿಕಸ್ಥ ರಾಷ್ಟ್ರ ಅಲ್ಲ ಎಂದಿರುವ ಟೆಡ್ ಪೋ, ಅಮೆರಿಕದ ಶತೃಗಳಿಗೆ ಹಲವು ವರ್ಷಗಳ ಕಾಲ ಪಾಕಿಸ್ತಾನ ಆಶ್ರಯ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ಭಯೋತ್ಪಾದನೆ ಉತ್ತೇಜಕ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟುವ ಮಸೂದೆ( ಪಾಕಿಸ್ತಾನ್ ಸ್ಟೇಟ್ ಸ್ಪಾನ್ಸರ್ ಆಫ್ ಟೆರರಿಸಂ ಡೆಸಿಗ್ನೇಷನ್ ಆಕ್ಟ್ ಹೆಚ್ ಆರ್ 6069) ನ್ನು ಮಂಡಿಸಿದ್ದಾರೆ.   
ಒಸಾಮಾ ಬಿನ್ ಲ್ಯಾಡನ್ ಗೆ ಆಶ್ರಯ ನೀಡುವುದರಿಂದ ಹಿಡಿದು, ಹಕ್ಕಾನಿ ನೆಟ್ವರ್ಕ್ ಜೊತೆಗಿನ ಸಂಬಂಧದವರೆಗೆ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾರ ಪರ ಇದೆ ಎಂಬುದು ಸ್ಪಷ್ಟವಾಗಿ ತಿಳಿಯಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಪಾಕಿಸ್ತಾನ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಅಮೆರಿಕ ಅಧ್ಯಕ್ಷರು 90 ದಿನಗಳ ಒಳಗಾಗಿ ವಿವರಣೆ ನೀಡಬೇಕೆಂದು ಮಸೂದೆಯನ್ನು ಮಂಡಿಸಿರುವ ಸಂಸದರು ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿಜೊತೆ ಮಾತುಕತೆ ರದ್ದುಗೊಳಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ?

ಇನ್ನು ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿರುವುದನ್ನು ಖಂಡಿಸಿ ರಷ್ಯಾ ಪಾಕಿಸ್ತಾನದೊಂದಿಗೆ ನಿಗದಿಯಾಗಿದ್ದ ಜಂಟಿ ಸೇನಾ ತಾಲೀಮನ್ನು ರದ್ದುಗೊಳಿಸಿದ ಬೆನ್ನಲ್ಲೇ, ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಬೆಂಬಲ ದೊರೆತಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗಿನ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com