ಈಜಿಪ್ಟ್ ನಲ್ಲಿ ನಿರಾಶ್ರಿತರ ಬೋಟ್ ಮುಳುಗಡೆ; ಸಮುದ್ರದಲ್ಲಿ 162 ಶವಗಳ ಪತ್ತೆ!

ಈಜಿಪ್ಟ್ ಕರಾವಳಿಯಲ್ಲಿ ಇತ್ತೀಚೆಗೆ ಮುಳುಗಡೆಯಾಗಿದ್ದ ಅಕ್ರಮ ವಲಸಿಗರ ಬೋಟ್ ಪ್ರಕರಣದಲ್ಲಿನ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರೆಗೂ ಸಮುದ್ರದಿಂದ ಸುಮಾರು 162 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಈಜಿಪ್ಟ್ ದೋಣಿ ದುರಂತ (ಸಂಗ್ರಹ ಚಿತ್ರ)
ಈಜಿಪ್ಟ್ ದೋಣಿ ದುರಂತ (ಸಂಗ್ರಹ ಚಿತ್ರ)

ರೊಸೆಟ್ಟಾ: ಈಜಿಪ್ಟ್ ಕರಾವಳಿಯಲ್ಲಿ ಇತ್ತೀಚೆಗೆ ಮುಳುಗಡೆಯಾಗಿದ್ದ ಅಕ್ರಮ ವಲಸಿಗರ ಬೋಟ್ ಪ್ರಕರಣದಲ್ಲಿನ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರೆಗೂ  ಸಮುದ್ರದಿಂದ ಸುಮಾರು 162 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಬುಧವಾರ ಕಾಫಿರ್-ಅಲ್-ಶೇಕ್ ಕರಾವಳಿ ತೀರದಿಂದ ಈಜಿಪ್ಟ್ ಕರಾವಳಿ ತೀರಕ್ಕೆ ಆಗಮಿಸುತ್ತಿದ್ದ ಬೋಟ್ ಮೆಡಿಟರೇನಿಯನ್ ಬಳಿ ಮುಳುಗಡೆಯಾಗಿದ್ದು, ಈ ವರೆಗೂ ಸುಮಾರು 162  ಶವಗಳನ್ನು ಹೊರತೆಗೆಯಲಾಗಿದೆ ಎಂದು ಬೆಹೈರಾ ಗವರ್ನರ್ ಮಹಮದ್ ಸುಲ್ತಾನ್ ಹೇಳಿದ್ದಾರೆ. ಮುಳುಗಡೆಯಾದವರಿಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ 30-40 ಮಂದಿ  ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗುತ್ತಿದೆ.

ಇನ್ನು ಮೀನು ಹಿಡಿಯುವ ಬಲೆಗಳನ್ನು ಹಾಕಿ ಶವಗಳನ್ನು ಮೇಲಕ್ಕೆ ತರುತ್ತಿರುವುದು ದುರಂತದ ಭೀಕರತೆಯನ್ನು ಬಿಂಬಿಸುತ್ತಿದೆ. ಇಡೀ ಸಮುದ್ರ ಶವಗಳಿಂದ ತುಂಬಿ ಹೋಗಿದೆ ಏನೋ ಎಂಬ  ಭಾವನೆ ಕೂಡ ವ್ಯಕ್ತವಾಗುತ್ತಿದೆ. ಅಧಿಕಾರಿಗಳು ಶಂಕಿಸಿರುವಂತೆ ಮಕ್ಕಳು ಮತ್ತು ಮಹಿಳೆಯರು ಸೇರಿ ಸುಮಾರು 450ಕ್ಕೂ ಹೆಚ್ಚು ಮಂದಿ ಮುಳುಗಿರುವ ಸಾಧ್ಯತೆ ಇದ್ದತು, ಈ ಸಂಖ್ಯೆ  600ಕ್ಕೇರಿದರೂ ಅಚ್ಚರಿ ಏನಿಲ್ಲ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಗಲಭೆ ಪೀಡಿತ ಸಿರಿಯಾ ಮತ್ತು ಆಫ್ರಿಕಾದಿಂದ ಈಜಿಪ್ಟ್ ಗೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಜಿಪ್ಟ್ ನಲ್ಲಿ ಆಶ್ರಯ ಪಡೆಯುವ ಸಲುವಾಗಿ ಲಕ್ಷಾಂತರ ಮಂದಿ ಅಕ್ರಮವಾಗಿ ಬೋಟ್ ಗಳ ಮೂಲಕ ಈಜಿಪ್ಟ್ ನತ್ತ ಧಾವಿಸುತ್ತಿದ್ದಾರೆ. ಪ್ರಸ್ತುತ ದುರಂತ ನಡೆದಿರುವ ಮೆಡಿಟರೇನಿಯನ್ ಸಮುದ್ರ ಮಾರ್ಗ ಹತ್ತಿರದ ಮಾರ್ಗವಾಗಿದ್ದು, ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಅಕ್ರಮವಾಗಿ ವಲಸಿಗರನ್ನು ಸಾಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆದರೆ ಬೋಟ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸಾಗಿಸುತ್ತಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚೆಚ್ಚು ದುರಂತಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com