
ಇಸ್ಲಾಮಾಬಾದ್: ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗಿನ ಸಂಬಂಧ ಹದಗೆಡುತ್ತಿರುವುದರಿಂದ ಹಾಗೂ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಿಂದಾಗಿ ಕಂಗೆಟ್ಟಿರುವ ಪಾಕಿಸ್ತಾನ ಸರ್ಕಾರ ಇದೀಗ ಪಾಕಿಸ್ತಾನದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಭಾರತೀಯ ಟಿವಿ ಚಾನೆಲ್ ಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ.
ಪಾಕಿಸ್ತಾನದಲ್ಲಿ ಭಾರತದ ಯಾವುದೇ ಚಾನೆಲ್ ಗಳ ಪ್ರಸಾರ ಮಾಡದಂತೆ ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್'ಎ) ನಿರ್ಧಾರವನ್ನು ಕೈಗೊಂಡಿದ್ದು, ಕೂಡಲೇ ಪಾಕಿಸ್ತಾನದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಭಾರತೀಯ ಟಿವಿ ಚಾನೆಲ್ ಗಳನ್ನು ಸ್ಥಗಿತಗೊಳಿಸುವಂತೆ ಡೀಲರ್ ಗಳಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಅ.15 ರಿಂದ ನಿಯಮ ಜಾರಿಯಾಗಲಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಭಾರತೀಯ ಚಾನೆಲ್ ಗಳನ್ನು ಪ್ರಸಾರ ಮಾಡಿದ್ದೇ ಆದರೆ, ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಇಎಂಆರ್'ಎ ಸೂಚನೆ ನೀಡಿದೆ ಎನ್ನಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ಸಂಬಂಧ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಚಿತ್ರಮಂದಿರಗಳ ಮಾಲೀಕರು ನಿರ್ಧಾರವೊಂದನ್ನು ಕೈಗೊಂಡಿದ್ದರು. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಗೊಳ್ಳುವವರೆಗೂ ಭಾರತೀಯ ಚಿತ್ರಗಳ ಪ್ರದರ್ಶನ ಮಾಡದಂತೆ ನಿರ್ಧಾರ ಕೈಗೊಂಡಿದ್ದರು.
Advertisement