
ಇಸ್ಲಾಮಾಬಾದ್: ಸುದ್ದಿ ಸಂಸ್ಥೆಯೊಂದರ ಸುಳ್ಳು ಸುದ್ದಿಯನ್ನು ನಂಬಿ ಸರ್ಕಾರದ ವಿರುದ್ಧ ಹರಿಹಾಯುವ ಮೂಲಕ ಪಾಕಿಸ್ತಾನ ಮಾಜಿ ಸಚಿವ ರೆಹಮಾನ್ ಮಲ್ಲಿಕ್ ಅಪಹಾಸ್ಯಕ್ಕೀಡಾಗಿದ್ದಾರೆ.
ಪಾಕಿಸ್ತಾನದ ಖ್ಯಾತ ದೈನಿಕ "ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್" ಇಸ್ಲಾಮಾಬಾದ್ ವಿಮಾನ ನಿಲ್ದಾಣದ ಹೆಸರನ್ನು ನವಾಜ್ ಷರೀಫ್ ಸರ್ಕಾರ ಮರು ನಾಮಕರಣ ಮಾಡಲು ಹೊರಟಿದೆ ಎಂಬ ಸುಳ್ಳುಸುದ್ದಿಯನ್ನು ಓದಿದ ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ರೆಹಮಾನ್ ಮಲ್ಲಿಕ್, ನವಾಜ್ ಷರೀಫ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ ಇಂತಹ ಮೂರ್ಖ ತನಕ್ಕೆ ಸರ್ಕಾರ ಮುಂದಾಗಿದ್ದೇ ಆದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಬಳಿಕ ಅದೊಂದು ಪ್ರಾಂಕ್ ಸುದ್ದಿ ಎಂದು ತಿಳಿದು ಇದೀಗ ರೆಹಮಾನ್ ಮಲ್ಲಿಕ್ ಪೇಚಿಗೆ ಸಿಲುಕಿದ್ದಾರೆ.
ಇಸ್ಲಾಮಾಬಾದ್ ನಲ್ಲಿರುವ ಹೊಸ ವಿಮಾನ ನಿಲ್ದಾಣಕ್ಕಿರುವ ಬೆನಜೀರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಎಪ್ರಿಲ್ ಫೂಲ್ ಸುದ್ದಿ ಹಬ್ಬಿಸಿತ್ತು. ಇದಕ್ಕೆ ಪೂರಕ ಎಂಬಂತೆ ಅದರ ಹಿಂದಷ್ಟೇ ಪಾಕ್ ಅಧಿಕಾರಿಗಳು ಚೀನಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಹೀಗಾಗಿ ಈ ಸುದ್ದಿ ಪಾಕಿಸ್ತಾನದಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಇದನ್ನು ಓದಿದ ಮರುಕ್ಷಣವೇ ಪ್ರತಿಕ್ರಿಯೆ ನೀಡಿದ್ದ ರೆಹಮಾನ್ ಮಲ್ಲಿಕ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಬಳಿಕ ಪತ್ರಿಕೆಯ ಸ್ಪಷ್ಟನೆಯಿಂದಾಗಿ ಅದು ಸುಳ್ಳು ಸುದ್ದಿ ತಿಳಿಯಿತು. ಸುಳ್ಳು ಓದಿ ಪ್ರತಿಕ್ರಿಯೆ ನೀಡುವ ಮೂಲಕ ರೆಹಮಾನ್ ಮಲ್ಲಿಕ್ ಇದೀಗ ಅಪಹಾಸ್ಯಕ್ಕೀಡಾಗಿದ್ದಾರೆ.
Advertisement