ಕಡಲ್ಗಳ್ಳರಿಂದ ಹಡಗು ರಕ್ಷಣೆ, ಭಾರತದ ಸಹಾಯ ಕಡೆಗಣಿಸಿದ ಚೀನಾ

ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದ ಸರಕು ಸಾಗಾಣಿಕಾ ಹಡಗಿನ ರಕ್ಷಣೆಯಲ್ಲಿ ಭಾರತದ ಸಹಾಯವನ್ನು ಕಡೆಗಣಿಸಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದ ಸರಕು ಸಾಗಾಣಿಕಾ ಹಡಗಿನ ರಕ್ಷಣೆಯಲ್ಲಿ ಭಾರತದ ಸಹಾಯವನ್ನು ಕಡೆಗಣಿಸಿರುವ ಚೀನಾ ನೌಕಾಪಡೆ ಅದರ ಸಂಪೂರ್ಣ ಕ್ರೀರ್ತಿ ತನಗೆ ಸಲ್ಲಬೇಕು ಎಂದು ಹೇಳಿಕೊಂಡಿದೆ.
ಭಾನುವಾರ ಹಿಂಸಾಚಾರ ಪೀಡಿತ ಯೆಮೆನ್ ನಿಂದ ಮಲೇಷ್ಯಾದತ್ತ ತೆರಳುತ್ತಿದ್ದ ಸರಕು ಸಾಗಾಣಿಕಾ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದರು. ಗಡಿ ವಿವಾದ ಮರೆತು ಭಾರತ ಮತ್ತು ಚೀನಾ ನೌಕಾಪಡೆಗಳು ದಾಳಿ ನಡೆಸಿ ಹಡಗು ಹಾಗೂ 19 ಸಿಬ್ಬಂದಿಯನ್ನು ರಕ್ಷಿಸಿದ್ದರು. ಆದರೆ ಭಾರತದ ಸಹಾಯವನ್ನು ಕಡೆಗಣಿಸಿರುವ ಚೀನಾ, ಖಚಿತ ಮಾಹಿತಿ ಆಧರಿಸಿ ತಾನೇ ರಕ್ಷಣಾ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿದೆ
ಸೊಮಾಲಿಯಾ ಕಡಲ್ಗಳ್ಳರಿಂದ ಅಪಹರಣಾಗಿದ್ದ ಹಗಡಿನ ರಕ್ಷಣೆ ಕಾರ್ಯಾಚರಣೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸಹಾಯ ಮಾಡಿರುವುದಾಗಿ ನಿನ್ನೆ ಭಾರತೀಯ ನೌಕಾಪಡೆ ಹೇಳಿತ್ತು.
ಭಾರತೀಯ ನೌಕಾಪಡೆ ಮೂಲಗಳ ಪ್ರಕಾರ, ಯೆಮೆನ್ ಅಡೆನ್ ನಿಂದ ಮಲೇಷ್ಯಾದ ಕೆಳಂಗ್ ಬಂದರಿನತ್ತ ಪ್ರಯಾಣ ಬೆಳೆಸುತ್ತಿದ್ದ ದಕ್ಷಿಣ ಫೆಸಿಫಿಕ್ ನ ಟುವಲು ದ್ವೀಪದ ನೋಂದಣಿಯ OS35 ಹಡಗನ್ನು ಸೊಮಾಲಿಯಾ ಕಡಲ್ಗಳ್ಳರು ಹಿಂಬಾಲಿಸಿ ದಾಳಿ ಮಾಡಿದ್ದು, ಈ ವಿಚಾರವನ್ನು ತಿಳಿದ ಬ್ರಿಟನ್ ನ ಕಡಲ ವ್ಯಾಪಾರ ಸಂಸ್ಥೆ (Maritime Trade Organisation) ಕೂಡಲೇ ಭಾರತೀಯ ನೌಕಾಪಡೆಗೆ ವಿಚಾರ ತಿಳಿಸಿದೆ. ವಿಚಾರ ತಿಳಿದ ಕೂಡಲೇ ಭಾರತೀಯ  ನೌಕಾದಳದ ಐಎನ್ ಎಸ್ ಮುಂಬೈ ಯುದ್ಧ ನೌಕೆ ಮತ್ತು ಐಎನ್ ಎಸ್ ಟರ್ಕಾಶ್ ದೌಡಾಯಿಸಿದ್ದು, ತನ್ನಲ್ಲಿನ ಹೆಲಿಕಾಪ್ಟರ್ ಗಳ ಮುಖಾಂತರ ಹಡಗನ್ನು ಹಿಂಬಾಲಿಸಿತು.
ಬೆಳಗಿನ ಜಾವದವರೆಗೂ ಹಡಗನ್ನು ಹಿಂಬಾಲಿಸಿದ ನೌಕಾಪಡೆ ತಮ್ಮ ಮೇಲೆ ಎಲ್ಲಿ ದಾಳಿ ಮಾಡುತ್ತಾರೆಯೋ ಎಂದು ಶಂಕಿಸಿದ ಕಡಲ್ಗಳ್ಳರು ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅತ್ತ ಕಡಲ್ಗಳ್ಳರು ಪರಾರಿಯಾಗುತ್ತಿದ್ದಂತೆಯೇ ಹಡಗಿನ  ಮೇಲೆ ಇಳಿದ ಸೈನಿಕರು ಹಡಗಿನ ಕ್ಯಾಪ್ಟನ್ ಗಾಗಿ ಶೋಧ ನಡೆಸುತ್ತಿದ್ದ ಸಂದರ್ಭದಲ್ಲಿ ಚೀನಾ ನೌಕಾಪಡೆ ಸೈನಿಕರೂ ಕೂಡ ಹಡಗಿನಲ್ಲಿ ಇಳಿದು ಹಡಗಿನ ಕ್ಯಾಪ್ಟನ್ ಅನ್ನು ಸಂಪರ್ಕಿಸಿ ಯಾವುದೇ ಅಪಾಯವಿಲ್ಲ ಎಂದು  ತಿಳಿಸಿದ್ದಾರೆ. 
ಅತ್ತ ಕಡಲ್ಗಳ್ಳರ ದಾಳಿ ಮುನ್ಸೂಚನೆ ದೊರೆಯುತ್ತಿದ್ದಂತೆಯೇ ಹಡಗಿನಲ್ಲಿದ್ದ ಸಿಬ್ಬಂದಿಗಳೆಲ್ಲಾ ಸ್ಟ್ರಾಂಗ್ ರೂಂಗೆ ತೆರಳಿ ಡೋರ್ ಲಾಕ್ ಮಾಡಿಕೊಂಡಿದ್ದರು. ಭಾರತ ಮತ್ತು ಚೀನಾ ಸೈನಿಕರು ಆಗಮಿಸಿದ ಬಳಿಕವಷ್ಟೇ  ಅವರು ಸ್ಟ್ರಾಂಗ್ ರೂಂ ಬಾಗಿಲು ತೆರೆದಿದ್ದಾರೆ.
ಹಡಗಿನಲ್ಲಿ ಸುಮಾರು 21 ಸಾವಿರ ಟನ್ ವಸ್ತುಗಳು ಇತ್ತು ಎಂದು ತಿಳಿದುಬಂದಿದ್ದು, ಈ ವಸ್ತುಗಳನ್ನು ಅಪಹರಿಸಲೆಂದೇ ಕಡಲ್ಗಳ್ಳರು ದಾಳಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಹಡಗನ್ನು ಸಂಪೂರ್ಣ  ಸುರಕ್ಷತೆಯೊಂದಿಗೆ ಮಲೇಷ್ಯಾಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಹಡಗಿನಲ್ಲಿದ್ದ ಚೀನಾ ಮೂಲದ ಸಿಬ್ಬಂದಿಯೋರ್ವ ಭಾರತೀಯ ನೌಕಾಪಡೆ ಶೌರ್ಯಕ್ಕೆ ಧನ್ಯವಾದ ತಿಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com