
ಬಾರ್ಸಿಲೋನಾ: ಸ್ಪೇನ್ ನ ಬಾರ್ಸಿಲೋನಾ ನಗರದಲ್ಲಿ ಗುರುವಾರ ಉಗ್ರರು ಭೀಕರ ದಾಳಿ ನಡೆಸಿದ್ದು, ಉಗ್ರನೊಬ್ಬ ಜನದಟ್ಟಣೆಯ ರಸ್ತೆಯಲ್ಲಿ ಟ್ರಕ್ ಅನ್ನು ಪಾದಚಾರಿಗಳ ಮೇಲೆ ನುಗ್ಗಿಸಿ ಕನಿಷ್ಠ 13 ಮಂದಿಯನ್ನು ಹತ್ಯೆಗೈದಿದ್ದು, ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೇಂದ್ರೀಯ ಸ್ಪೇನ್ ನ ಬಾರ್ಸಿಲೋನಾ ನಗರದ ಪ್ರಸಿದ್ಧ ಲಾಸ್ ರಾಂಬ್ಲಾಸ್ ಪ್ರವಾಸಿ ತಾಣದಲ್ಲಿ ಈ ದಾಳಿ ನಡೆದಿದ್ದು, ಸ್ಪೇನ್ ಪೊಲೀಸರು ಇದು ಉಗ್ರ ದಾಳಿ ಎಂದು ಖಚಿತ ಪಡಿಸಿದ್ದಾರೆ. ಘಟನೆಯ ಬಳಿಕ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಹಂತಕ ಚಾಲಕನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಇದೇ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಶಂಕಿತ ಉಗ್ರನನ್ನು ಹೊಡೆದುರುಳಿಸಲಾಗಿದ್ದು, ಇನ್ನಿಬ್ಬರು ಉಗ್ರರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಂಕಿತ ಉಗ್ರರ ಬಂಧನ ಅಥವಾ ಹತ್ಯೆಗೈಯ್ಯಲು ಪೊಲೀಸರಿಗೆ ಆದೇಶ ನೀಡಲಾಗಿದ್ದು, ಬಾರ್ಸಿಲೋನಾ ಸೇರಿದಂತೆ ಸ್ಪೇನ್ ನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಉಗ್ರರು ಬಾರ್ಸಿಲೋನಾ ನಗರ ಬಿಟ್ಟು ಪರಾರಿಯಾಗದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಮೊರಾಕ್ಕೋ ಮೂಲದ ಟ್ರಕ್ ಅನ್ನು ಬಾಡಿಗೆಗೆ ಪಡೆದಿದ್ದ ಉಗ್ರರು ಅತೀ ಹೆಚ್ಚು ಪ್ರವಾಸಿಗರು ಸೇರುವ ಲಾಸ್ ರಾಂಬ್ಲಾಸ್ ಅವೆನ್ಯೂ ರಸ್ತೆಯಲ್ಲಿ ಟ್ರಕ್ ಅನ್ನು ಯದ್ವಾತದ್ವಾ ಚಲಾಯಿಸಿದ್ದಾರೆ. ಈ ವೇಳೆ ಹಲವು ನಾಗರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Advertisement