
ಬಾರ್ಸಿಲೋನಾ: ಸ್ಪೇನ್ ನ ಬಾರ್ಸಿಲೋನಾ ನಗದರಲ್ಲಿ ಉಗ್ರ ನಡೆಸಿದ ದಾಳಿಯ ಹೊಣೆಯನ್ನು ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇಸಿಸ್ ಹೊತ್ತಿದ್ದು, ಇಸ್ಲಾಮಿಕ್ ಸಂಘಟನೆಯ ಯೋಧರೇ ಈ ದಾಳಿ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.
ಇಸಿಸ್ ಉಗ್ರ ಸಂಘಟನೆಯ ಮುಖವಾಣಿ ಆಮಾಖ್ ಈ ಬಗ್ಗೆ ಸುದ್ದಿ ಬಿತ್ತರಿಸಿದ್ದು, ಇಸ್ಲಾಮಿಕ್ ಸ್ಟೇಟ್ ಸಂಘಟನೆ ವೀರ ಯೋಧರೇ ದಾಳಿ ನಡೆಸಿದ್ದು, ಸ್ಪೇನ್ ನಲ್ಲಿ ಮತ್ತಷ್ಟು ಉಗ್ರ ದಾಳಿಗಳನ್ನು ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಿರಿಯಾ ಮತ್ತು ಇರಾಕ್ ನಲ್ಲಿ ಸಂಘಟನೆ ನಡೆಸುತ್ತಿರುವ ಹೋರಾಟಕ್ಕೆ ಸ್ಪೇನ್ ಸರ್ಕಾರ ಅಡ್ಡಗಾಲು ಹಾಕುತ್ತಿದ್ದು, ವಿರೋಧಿ ಬಣಗಳ ಸೈನಿಕರಿಗೆ ನೆರವು ನೀಡುತ್ತಿದೆ. ಇದನ್ನು ವಿರೋಧಿಸಿ ಈ ದಾಳಿ ನಡೆಸಲಾಗಿದೆ ಎಂದು ಅಮಾಖ್ ಸುದ್ದಿ ಬಿತ್ತರಿಸಿದೆ.
ಇನ್ನು ಬಾರ್ಸಿಲೋನಾದ ಲಾಸ್ ರಾಂಬ್ಲಾಸ್ ಪ್ರವಾಸಿ ತಾಣದಲ್ಲಿ ದಾಳಿ ನಡೆಸಿದ ಉಗ್ರರ ಪೈಕಿ ಇಬ್ಬರು ಉಗ್ರರ ಮೂಲವನ್ನು ಪೊಲೀಸರು ಶೋಧಿಸಿದ್ದು, ಓರ್ವ ಮೊರಾಕ್ಕೋ ಮೂಲದವನು ಎಂದು ತಿಳಿದುಬಂದಿದೆ. ಮತ್ತೋರ್ವ ಉಗ್ರನನ್ನು ಸ್ಪೇನ್ ನ ಉತ್ತರ ಆಫ್ರಿಕನ್ನರೇ ಹೆಚ್ಚಾಗಿ ವಾಸವಿರುವ ಮೆಲಿಲಾ ಪ್ರದೇಶದ ನಿವಾಸಿ ಎಂದು ಗುರುತಿಸಿದ್ದಾರೆ.
ಎಷ್ಟು ಮಂದಿ ಉಗ್ರರು ದಾಳಿ ನಡೆಸಿದ್ದಾರೆ ಎಂಬುದೇ ಇನ್ನೂ ಪತ್ತೆಯಾಗಿಲ್ಲ
ಇನ್ನು ಬಾರ್ಸಿಲೋನಾ ಮೇಲೆ ಎಷ್ಟು ಮಂದಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದಿಲ್ಲ. ಇತ್ತ ಲಾಸ್ ರಾಂಬ್ಲಾಸ್ ಪ್ರವಾಸಿ ತಾಣದಲ್ಲಿ ನಾಲ್ಕಕೂ ಹೆಚ್ಚು ಉಗ್ರರ ದಾಳಿ ಮಾಡಿ ಪರಾರಿಯಾಗಿದ್ದು, ಅತ್ತ ಕ್ಯಾಂಬ್ರಿಲ್ಸ್ ನಲ್ಲಿಯೂ 6ಕ್ಕೂ ಹೆಚ್ಚು ಉಗ್ರರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಎಷ್ಟು ಮಂದಿ ಉಗ್ರರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ.
Advertisement