
ಬಾರ್ಸಿಲೋನಾ: ಸ್ಪೇನ್ ನ ಬಾರ್ಸಿಲೋನಾ ನಗದರ ಮೇಲೆ ಉಗ್ರರ ದಾಳಿ ಮುಂದುವರೆದಿದ್ದು, ಇತ್ತ ಕ್ಯಾಂಬ್ರಿಲ್ಸ್ ನಲ್ಲಿ 2ನೇ ದಾಳಿಗೆ ಸಂಚು ಹೂಡಿದ್ದ ಉಗ್ರರ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ಕ್ಯಾಂಬ್ರಿಲ್ಸ್ ನಲ್ಲಿ ಪ್ರಬಲ ಬಾಂಬ್ ಸ್ಫೋಟ ನಡೆಸುವ ಮೂಲಕ ಭಾರಿ ವಿಧ್ವಂಸಕ್ಕೆ ಉಗ್ರರು ಮುಂದಾಗಿದ್ದ ವೇಳೆ ತತ್ ಕ್ಷಣದಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 4 ಮಂದಿ ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದ. ಗಾಯಾಳು ಉಗ್ರ ಗುಂಡೇಟಿನೊಂದಿಗೇ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದು, ಈ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಘಟನಾ ಸ್ಥಳದಿಂದ ಸುಮಾರು 3 ಕಿ.ಮೀ ದೂರದಲ್ಲಿ ಉಗ್ರಗಾಮಿ ತನ್ನ ವಾಹನವನ್ನು ನಿಲ್ಲಿಸಿದ್ದು, ಈ ವೇಳೆಗಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಕ್ಯಟಲನ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆದರೆ ಈ ಉಗ್ರ ಪೊಲೀಸರ ಗುಂಡಿಗೆ ಬಲಿಯಾದನೇ ಅಥವಾ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ತಾನೇ ಗುಂಡು ಹಾರಿಸಿಕೊಂಡನೇ ಎಂಬ ವಿಚಾರ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಮೂಲಗಳ ತಿಳಿಸಿರುವಂತೆ ಉಗ್ರರು ತಮ್ಮ ಬ್ಯಾಗ್ ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಹೊತ್ತು ಬಂದಿದ್ದರು. ಕ್ಯಾಂಬ್ರಿಲ್ಸ್ ನ ಅತೀ ಹೆಚ್ಚು ಜನರಿರುವ ಪ್ರದೇಶದಲ್ಲಿ ಈ ಸ್ಫೋಟಕಗಳನ್ನು ಇಟ್ಟು ಸ್ಫೋಟಿಸಬೇಕು ಎನ್ನುವುದು ಉಗ್ರರ ಗುರಿಯಾಗಿತ್ತು. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತ ತಪ್ಪಿದಂತಾಗಿದೆ. ಇನ್ನು ಕಾಂಬ್ರಿಲ್ಸ್ ನಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಕುರಿತು ಶಂಕೆ ಇದ್ದು, ಕ್ಯಾಂಬ್ರಿಲ್ಸ್ ಪ್ರದೇಶದ ಪ್ರತೀಯೊಂದು ಕಟ್ಟಡಗಳಲ್ಲೂ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
6 ನಾಗರಿಕರೆಗೆ ಗಾಯ, ಓರ್ವ ಪೊಲೀಸ್ ಅಧಿಕಾರಿ ಗಂಭೀರ
ಇನ್ನು ಕ್ಯಾಂಬ್ರಿಲ್ಸ್ ಬಳಿ ಉಗ್ರರು ಸಿಡಿಸಿದ ಗುಂಡಿನ ದಾಳಿ ವೇಳೆ 6 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಓರ್ವ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement