ಪಶ್ಚಿಮ ಯೂರೋಪ್ ನಲ್ಲಿ ನಡೆದ ವಿವಿಧ ಭೀಕರ ಉಗ್ರ ದಾಳಿಗಳ ಪಟ್ಟಿ

ಸ್ಪೇನ್ ನ ಬಾರ್ಸಿಲೋನಾದಲ್ಲಿ ನಡೆದ ಉಗ್ರದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಪೊಲೀಸ್ ಕಾರ್ಯಾಚರಣೆಯಲ್ಲಿ 5 ಮಂದಿ ಉಗ್ರರು ಹತರಾಗಿದ್ದು, ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.
ಬಾರ್ಸಿಲೋನಾ ಉಗ್ರ ದಾಳಿ
ಬಾರ್ಸಿಲೋನಾ ಉಗ್ರ ದಾಳಿ
Updated on

ವಾಷಿಂಗ್ಟನ್: ಸ್ಪೇನ್ ನ ಬಾರ್ಸಿಲೋನಾದಲ್ಲಿ ನಡೆದ ಉಗ್ರದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಪೊಲೀಸ್ ಕಾರ್ಯಾಚರಣೆಯಲ್ಲಿ 5 ಮಂದಿ ಉಗ್ರರು ಹತರಾಗಿದ್ದು, ಇಬ್ಬರು  ಉಗ್ರರನ್ನು ಬಂಧಿಸಲಾಗಿದೆ.

2004ರಿಂದೀಚೆಗೆ ಸ್ಪೇನ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ಇದಾಗಿದ್ದು, ಪಶ್ಚಿಮ ಯೂರೋಪ್ ನಲ್ಲಿ ಈ ಹಿಂದೆ ನಡೆದ ವಿವಿಧ ಉಗ್ರ ದಾಳಿಗಳ ಪಟ್ಟಿ ಇಲ್ಲಿದೆ.

2014 ಮೇ 24-ಬ್ರುಸೆಲ್ಸ್ ನ ಯಹೂದಿ ಮ್ಯೂಸಿಯಂ ಮೇಲೆ ದಾಳಿ
2014ರ ಮೇ 24ರಂದು ಕೇಂದ್ರೀಯ ಬ್ರುಸೆಲ್ಸ್ ನ ಯಹೂದಿ ಮ್ಯೂಸಿಯಂ ಮೇಲೆ ಭೀಕರ ಉಗ್ರ ದಾಳಿಯಾಗಿತ್ತು. ಫ್ರಾನ್ಸ್ ಮೂಲದ ಉಗ್ರನೋರ್ವ ಏಕಾಏಕಿ ಗುಂಡಿನ ಮಳೆಗರೆದು 4 ಮಂದಿಯನ್ನು ಹತ್ಯೆಗೈದಿದ್ದ. ಬಳಿಕ ಈತ  ಪರಾರಿಯಾಗಿದ್ದನಾದರೂ ಕಾರ್ಯಾಚರಣೆ ನಡೆಸಿದ ಪೊಲೀಸರು ಮರ್ಸೇಲ್ ನಲ್ಲಿ ಉಗ್ರನನ್ನು ಬಂಧಿಸಿದ್ದರು. ಬಂಧಿತನನ್ನು 29 ವರ್ಷದ ಫ್ರಾನ್ಸ್ ಪ್ರಜೆ ನೆಮ್ಮೌಚ್ ಎಂದು ಗುರುತಿಸಲಾಗಿತ್ತು.

2015ರ ಚಾರ್ಲಿ ಹೆಬ್ಡೋ ನಿಯತಕಾಲಿಕೆ ಕಚೇರಿ ಮೇಲೆ ದಾಳಿ
ಫ್ರಾನ್ಸ್ ನಲ್ಲಿರುವ ಖ್ಯಾತ ನಿಯತಕಾಲಿಕೆ ಚಾರ್ಲಿ ಹೆಬ್ಡೋ ಮೇಲೆ 2015ರ ಜನವರಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಭೀಕರ ಗುಂಡಿನ ದಾಳಿ ನಡೆಸಿದ್ದರು. ಮಹಮದ್ ಕುರಿತ ವ್ಯಂಗ್ಯ ಚಿತ್ರಕ್ಕೆ ಆಕ್ರೋಶ ವ್ಯಕ್ತಪಡಿಸಿ ಈ ದಾಳಿ  ನಡೆಸಲಾಗಿತ್ತು. ದಾಳಿ ವೇಳೆ ನಾಲ್ಕು ಮಂದಿಯನ್ನು ಉಗ್ರರು ಕೊಂದು ಹಾಕಿದ್ದರು. ಬಳಿಕ ಪರಾರಿಯಾಗಿದ್ದ ಉಗ್ರರನ್ನು ಬೆನ್ನಟ್ಟಿದ್ದ ಪೊಲೀಸರು 2 ದಿನಗಳ ಬಳಿಕ ಅಂದರೆ ಜನವರಿ 9ರಂದು ಕಾರ್ಯಾಚರಣೆ ನಡೆಸಿ ಕೊಂದು  ಹಾಕಿದ್ದರು.

2015 ನವೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ಮತ್ತೆ ದಾಳಿ
ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ 2015ರ ನವೆಂಬರ್ ನಲ್ಲಿ ಮತ್ತೆ ಪ್ಯಾರಿಸ್ ಮೇಲೆ ಉಗ್ರರು ದಾಳಿ ಮಾಡಿದ್ದರು. ವಿವಿಧ ಜನಾಕರ್ಷಕ ತಾಣಗಳ ಮೇಲೆ ದಾಳಿ ನಡೆಸಿದ್ದ ಉಗ್ರರು 130 ಮಂದಿಯನ್ನು  ಬಲಿ ತೆಗೆದುಕೊಂಡಿದ್ದರು. ಅಂತೆಯೇ ದಾಳಿಯಲ್ಲಿ 368 ಮಂದಿ ಗಾಯಗೊಂಡಿದ್ದರು. ದಾಳಿಯಲ್ಲಿ ಬೆಲ್ಜಿಯನ್ ಮೂಲದ 10 ಉಗ್ರರು ಹಾಗೂ ಮೂವರು ಫ್ರಾನ್ಸ್ ಮೂಲದ ಉಗ್ರರು ಪಾಲ್ಗೊಂಡಿದ್ದರು.

2016, ಮಾರ್ಚ್ 22 ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ಸ್ಫೋಟ
2016, ಮಾರ್ಚ್ 22 ರಂದು ಪಶ್ಚಿಮ ಯೂರೋಪ್ ಮತ್ತೆ ಬೆಚ್ಚಿ ಬಿದ್ದಿತ್ತು. ಬೆಲ್ಜಿಯನ್ ರಾಜಧಾನಿ ಬ್ರುಸೆಲ್ಸ್ ನ ವಿಮಾನ ನಿಲ್ದಾಣದಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 32 ಮಂದಿ ಸಾವನ್ನಪ್ಪಿದ್ದರು. ಅಂತೆಯೇ ವಿಮಾನ  ನಿಲ್ದಾಣದಲ್ಲಿದ್ದ ಓರ್ವ ಉಗ್ರ ತನ್ನ ಸೊಂಟದಲ್ಲಿದ್ದ ಬಾಂಬ್ ಅನ್ನು ಸ್ಪೋಟಿಸಿಕೊಂಡ ದೃಶ್ಯ ಕೂಡ ವೈರಲ್ ಆಗಿತ್ತು.

2016 ಜೂನ್ 14-ಫ್ರಾನ್ಸ್ ಪೊಲೀಸ್ ಅಧಿಕಾರಿಗೆ ಚೂರಿ ಇರಿದ ಉಗ್ರ
2016 ಜೂನ್ 14ರಂದು ಮೊರಾಕ್ಕೋ ಮೂಲದ ಉಗ್ರನೋರ್ವ ಪ್ಯಾರಿಸ್ ನಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಮನಸೋ ಇಚ್ಚೆ ಇರಿದು ಕೊಂದು ಹಾಕಿದ್ದ. ಬಳಿಕ ಆತನನ್ನು ಸೆರೆ ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾಗ  ಹತ್ಯೆಗೀಡಾಗಿದ್ದ ಪೊಲೀಸ್ ಅಧಿಕಾರಿಯ ಪತ್ನಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ. ಬಳಿಕ ತಾನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಉಗ್ರ ಎಂದು ಹೇಳಿಕೊಂಡಿದ್ದ.

ಜುಲೈ 14 2016-ಫ್ರಾನ್ಸ್ ನ ನೀಸ್ ನಗರದ ಬ್ಯಾಸ್ಟೈಲ್ ಡೇ ಆಚರಣೆ ಮೇಲೆ ದಾಳಿ
2016ರ ಜುಲೈ 14ರಂದು ಫ್ರಾನ್ಸ್ ನ ನೀಸ್ ನಗರದ ಮೇಲೆ ಮತ್ತೆ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸಿದ್ದರು. ನೀಸ್ ನಗರದಲ್ಲಿ ನಡೆಯುತ್ತಿದ್ದ ಬ್ಯಾಸ್ಟೈಲ್ ಡೇ ಆಚರಣೆ ವೇಳೆ ಉಗ್ರನೋರ್ವ ಸ್ಫೋಟಕ ತುಂಬಿದ್ದ ಟ್ರಕ್ ಅನ್ನು  ಜನರ ಮೇಲೆ ಹರಿಸಿದ್ದ. ಈ ಘಟನೆಯಲ್ಲಿ ಸುಮಾರು 86 ಮಂದಿ ಸಾವನ್ನಪ್ಪಿದ್ದರು. ಟ್ರಕ್ ಹರಿಸಿದ ಉಗ್ರನನ್ನು ಟ್ಯುನಿಶಿಯಾ ಮೂಲದ ಉಗ್ರ ಎಂದು ಗುರಿತಸಲಾಗಿತ್ತು

2016 ಜುಲೈ 18-ಜರ್ಮನ್ ರೈಲಿನಲ್ಲಿ ಪ್ರಯಾಣಿಕರಿಗೆ ಇರಿದ ಉಗ್ರ
2016 ಜುಲೈ 18 ರಂದು ದಕ್ಷಿಣ ಜರ್ಮನಿಯ ಪ್ಯಾಸೆಂಜರ್ ರೈಲಿನಲ್ಲಿ ಉಗ್ರನೋರ್ವ ಪ್ರಯಾಣಿಕರಿಗೆ ಮನಸೋ ಇಚ್ಚೆ ಇರಿದಿದ್ದರು. ಈ ಘಟನೆಯಲ್ಲಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ವಿಚಾರ ತಿಳಿದ  ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ಕು ಮಂದಿ ಉಗ್ರರನ್ನು ಕೊಂದು ಹಾಕಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ದಾಳಿ ಹೊಣೆ ಹೊತ್ತಿತ್ತು.

2016 ಜುಲೈ 22-ಮ್ಯೂನಿಚ್ ನಲ್ಲಿ ಉಗ್ರ ದಾಳಿ
2016 ಜುಲೈ 22ರಂದು ಮ್ಯೂನಿಚ್ ನಗರದಲ್ಲಿ 18 ವರ್ಷದ ಜರ್ಮನ್-ಇರಾನಿಯನ್ ಗನ್ ಮ್ಯಾನ್ ಓರ್ವ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ 9 ಮಂದಿ ಸಾವನ್ನಪ್ಪಿದ್ದರು. ಇದೇ ಸಂದರ್ಭದಲ್ಲಿ ನಾರ್ವೇಯಲ್ಲೂ  ಇಂತಹುದೇ ದಾಳಿಯಲ್ಲಿ 77 ಮಂದಿ ಸಾವನ್ನಪ್ಪಿದ್ದರು.

2016-ಡಿಸೆಂಬರ್ 19-ಬರ್ಲಿನ್ ಟ್ರಕ್ ದಾಳಿ
2016ರ ಡಿಸೆಂಬರ್ 19ರಂದು ಕೇಂದ್ರೀಯ ಬರ್ಲಿನ್ ನ ಕ್ರಿಸ್ ಮಸ್ ಮಾರ್ಕೆಟ್ ನಲ್ಲಿ ಉಗ್ರನೋರ್ವ ಟ್ರಕ್ ಹರಿಸಿ 12 ಮಂದಿಯನ್ನು ಕೊಂದು ಹಾಕಿದ್ದ. ಘಟನೆಯಲ್ಲಿ 48 ಮಂದಿ ಗಾಯಗೊಂಡಿದ್ದರು. ಜರ್ಮನ್ ಚಾನ್ಸಿಲರ್ ಏಂಜೆಲಾ  ಮಾರ್ಕೆಲ್ ಅವರು ಇದನ್ನು ಉಗ್ರ ದಾಳಿ ಎಂದು ಹೇಳಿದ್ದರು.

2017-ಏಪ್ರಿಲ್ 7-ಸ್ಟಾಕ್ ಹೋಮ್ ದಾಳಿ
ಏಪ್ರಿಲ್ 7-2017ರಂದು ಕೇಂದ್ರೀಯ ಸ್ಟಾಕ್ ಹೋಮ್ ನಲ್ಲಿ ಉಗ್ರ ನೋರ್ವ ಪಾದಾಚಾರಿಗಳ ಮೇಲೆ ಟ್ರಕ್ ಹರಿಸಿದ್ದ. ಈ ವೇಳೆ 5 ಮಂದಿ ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದರು.

ಮೇ 22, 2017-ಮ್ಯಾಂಚೆಸ್ಟರ್ ದಾಳಿ
ಮೇ 22, 2017ರಂದು ಇಂಗ್ಲೆಂಡ್ ಮ್ಯಾಂಚೆಸ್ಟರ್ ನಲ್ಲಿ ಆತ್ಮಹತ್ಯಾ ದಾಳಿ ನಡೆಸಲಾಗಿತ್ತು. ಈ ವೇಳೆ 22 ಮಕ್ಕಳು ಸೇರಿದಂತೆ 59 ಮಂದಿ ಸಾವನ್ನಪ್ಪಿದ್ದರು. ಅಮೆರಿಕ ಮೂಲದ ಗಾಯಕ ಆರಿಯಾನಾ ಗ್ರಾಂಡೇ ಸಂಗೀತ  ಕಾರ್ಯಕ್ರಮದ ಬಳಿಕ ಈ ದಾಳಿ ನಡೆದಿತ್ತು.

2017 ಜೂನ್ 3-ಲಂಡನ್ ಸೇತುವೆ ಬಳಿ ಶೂಟೌಟ್ ಮತ್ತು ಚಾಕು ಇರಿತ
2017 ಜೂನ್ 3 ಲಂಡನ್ ಬ್ರಿಡ್ಜ್ ಬಳಿ ಉಗ್ರ ದಾಳಿ ನಡೆದಿತ್ತು. ಈ ವೇಳೆ ಮೂವರು ದಾಳಿಕೋರರು ಪಾದಾಚಾರಿಗಳ ಮೇಲೆ ದಾಳಿ ಮಾಡಿದ್ದರು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ 48 ಮಂದಿ ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್  ಉಗ್ರ ಸಂಘಟನೆ ದಾಲಿ ಹೊಣೆ ಹೊತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com