ಬಾರ್ಸಿಲೋನಾ ಉಗ್ರರ ದಾಳಿ: ಫ್ರೀಜರ್"ನಲ್ಲಿ ಅವಿತು ಪಾರಾದ ಭಾರತೀಯ ಮೂಲದ ನಟಿ!

ಸ್ಪೇನ್'ನ ಬಾರ್ಸಿಲೋನಾದಲ್ಲಿ ಉಗ್ರರು ದಾಳಿ ನಡೆಸಿದ್ದ ವೇಳೆ ಸ್ಥಳದಲ್ಲಿಯೇ ಇದ್ದ ಭಾರತೀಯ ಮೂಲದ ಬ್ರಿಟೀಷ್ ನಟಿಯೊಬ್ಬರು ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ...
ಭಾರತೀಯ ಮೂಲದ ಬ್ರಿಟೀಷ್ ನಟಿ ಲೈಲಾ ರಾಸ್
ಭಾರತೀಯ ಮೂಲದ ಬ್ರಿಟೀಷ್ ನಟಿ ಲೈಲಾ ರಾಸ್
ಲಂಡನ್: ಸ್ಪೇನ್'ನ ಬಾರ್ಸಿಲೋನಾದಲ್ಲಿ ಉಗ್ರರು ದಾಳಿ ನಡೆಸಿದ್ದ ವೇಳೆ ಸ್ಥಳದಲ್ಲಿಯೇ ಇದ್ದ ಭಾರತೀಯ ಮೂಲದ ಬ್ರಿಟೀಷ್ ನಟಿಯೊಬ್ಬರು ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಉಗ್ರರು ದಾಳಿ ನಡೆಸಿದ್ದ ವೇಳೆ 46 ವರ್ಷ ಭಾರತೀಯ ಮೂಲದ ಬ್ರಿಟೀಷ್ ನಟಿ ಲೈಲಾ ರಾಸ್ ಎಂಬುವವರು ರೆಸ್ಟೋರೆಂಟ್ ವೊಂದರ ಫ್ರೀಜರ್ ನಲ್ಲಿ ಅವಿತುಕೊಂಡು ಜೀವವನ್ನು ಉಳಿಸಿಕೊಂಡಿದ್ದಾರೆ. 
ರಜೆ ದಿನಗಳನ್ನು ಕಳೆಯುವ ಸಲುವಾಗಿ ಲೈಲಾ ಅವರು 10 ವರ್ಷದ ಮಗಳೊಂದಿಗೆ ಬಾರ್ಸಿಲೋನಾಗೆ ತೆರಳಿದ್ದರು. ಈ ವೇಳೆ ಲಾಸ್ ರಾಂಬ್ಲಾಸ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ ಕಂಗಾಲಾದ ನಟಿ ರಕ್ಷಣೆಗಾಗಿ ರೆಸ್ಟೋರೆಂಟ್ ನ ಫ್ರೀಜರ್ ನಲ್ಲಿ ಅವಿತುಕೊಂಡು ಅಲ್ಲಿಂದಲೇ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ನೇರವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. 
ನಗರದ ಮಧ್ಯಭಾಗದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ನಾನು ರೆಸ್ಟೋರೆಂಟ್'ನ ಫ್ರೀಜರ್ ವೊಂದರಲ್ಲಿ ಅವಿತುಕೊಂಡಿದ್ದೇನೆ. ಎಲ್ಲವೂ ಬಹಳ ಶೀಘ್ರವಾಗಿ ನಡೆಯಿತು. ಎಲ್ಲರೂ ಸುರಕ್ಷಿತವಾಗಿ ಉಳಿಯಲಿ ಎಂದು ಪ್ರಾರ್ಥಿಸುತ್ತೇನೆಂದು ಲೈಲಾ ರಾಸ್ ದಾಳಿ ನಡೆದ ಸಂದರ್ಭದಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. 
ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳಿಸುತ್ತಿದೆ. ಸಶಸ್ತ್ರಧಾರಿಗಳು ಪೊಲೀಸು ನಗರದ ಸುತ್ತಲೂ ಸುತ್ತುವರೆದಿದ್ದು ಉಗ್ರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ದಾಳಿ ಅಂತ್ಯಗೊಂಡ ಬಳಿಕ ಟ್ವೀಟ್ ಮಾಡಿರುವ ಲೈಲಾ, ನಮ್ಮನ್ನು ಸುರಕ್ಷಿತವಾಗಿ ನೋಡಿಕೊಂಡ ರೆಸ್ಟೋರೆಂಟ್'ನ ಎಲ್ಲಾ ಸಿಬ್ಬಂದಿಗಲೂ ನನ್ನ ಧನ್ಯವಾದ. ಐ ಲವ್ ಯೂ ಬಾರ್ಸಿಲೋನಾ ಎಂದು ಹೇಳಿಕೊಂಡಿದ್ದಾರೆ. 
ಲೈಲಾ ಅವರು ಮೂಲತಃ ಭಾರತದವರಾಗಿದ್ದು, ಅವರ ತಾಯಿ ಭಾರತದವರಾಗಿದ್ದಾರೆ. ತಂದೆ ಮೊರಾಕ್ಕೊದವರು. ಬ್ರಿಟೀಷ್ ಕಿರುತೆರೆಯಲ್ಲಿ ಬರುವ ಫುಟ್ ಬಾಲರ್ಸ್, 'ವೈವ್ಸ್'ಮತ್ತು ಹೊಲ್ಬಿ ಸಿಟಿ ಎಂಬ ಜನಪ್ರಿಯ ಧಾರಾವಾಹಿಗಳಲ್ಲಿ ಲೈಲಾ ನಟಿಸುತ್ತಿದ್ದಾರೆ. 
ಐತಿಹಾಸಿಕ ಪ್ರದೇಶವಾಗಿರುವ ಲಾಸ್ ರಾಂಬ್ಲಾಸ್ ನಲ್ಲಿ ಪಾದಚಾರಿಗಳ ಮೇಲೆ ಟ್ರಕ್ ನುಗ್ಗಿಸಿ 14 ಜನರನ್ನು ಉಗ್ರರು ಹತ್ಯೆ ಮಾಡಿದ್ದರು. ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಉಗ್ರರ ವಿರುದ್ದ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದ ಭದ್ರತಾ ಸಿಬ್ಬಂದಿಗಳೂ ಐವರು ಉಗ್ರರನ್ನು ಹೊಡೆದುರುಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com