ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹತ್ಯೆಗೆ ಯತ್ನ: 10 ಮಂದಿಗೆ ಗಲ್ಲು ಶಿಕ್ಷೆ!
ಢಾಕಾ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಹತ್ಯೆಗೆ ಯತ್ನಿಸಿದ್ದ 10 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
17 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಬಾಂಗ್ಲಾದೇಶದ ಎರಡನೇ ತ್ವರಿತಗತಿ ನ್ಯಾಯಾಲಯ ಇಂದು ತನ್ನ ಮಹತ್ವದ ತೀರ್ಪು ನೀಡಿದ್ದು, ಹತ್ಯೆಗೆ ಯತ್ನಿಸಿದವರ ಪೈಕಿ 10 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಅಂತೆಯೇ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ 9 ಮಂದಿಗೆ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಸಜೆ ವಿಧಿಸಿದ್ದು, ಓರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಗಲ್ಲು ಶಿಕ್ಷೆಗೊಳಗಾದವರನ್ನು ವಾಸಿಮ್ ಅಖ್ತರ್, ಎಂ.ಡಿ ಯೂಸುಫ್, ಎಂ.ಡಿ.ರಾಶ್ಡ್ ಡ್ರೈವರ್, ಶೇಖ್ ಫೊರಿದ್, ಹಫೀಜ್ ತರೇಕುಲ್ ಅಲಮ್ ಬೊಡೊರ್, ಮೌಲಾನಾ ಅಬು ಬಕರ್, ಮುಫ್ತಿ ಶೋಫಿಯೂರ್ ರಹಮಾನ್, ಮೌಲಾನಾ ಯಾಹ್ಯಾ, ಮುಫ್ತಿ ಅಬ್ದುಲ್ ಹೈ ಮತ್ತು ಮನ್ನನ್ ಅಬ್ದುಲ್ ರೌಫ್ ಎಂದು ಗುರುತಿಸಲಾಗಿದೆ. ಇವರೆಲ್ಲರನ್ನೂ ಗುಲ್ಲು ಶಿಕ್ಷೆಗೆ ಅಥವಾ ಶಸ್ತ್ರಸ್ತ್ರ ಯೋಧರಿಂದ ಗುಂಡು ಹೊಡೆಸಿಕೊಲ್ಲಲಾಗುತ್ತದೆ ಎಂದು ಹೇಳಲಾಗುತ್ತಿದೆ.
2010ರ ಜುಲೈ 10 ಬಾಂಗ್ಲಾದೇಶದ ಗೋಪಾಲ್ ಗಂಜ್ ನಲ್ಲಿರುವ ಶೇಖ್ ಲುತ್ಫರ್ ರಹಮಾನ್ ಐಡಿಯಲ್ ಕಾಲೇಜು ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಪ್ರಧಾನಿಯಾಗಿ ಶೇಖ್ ಹಸೀನಾ ತೆರಳಿದ್ದಾಗ ಅವರ ಹತ್ಯೆಗೆ ಯತ್ನಿಸಲಾಗಿತ್ತು. ಈ ವೇಳೆ ತುರ್ತು ಕಾರ್ಯಾಚರಣೆ ನಡೆಸಿದ್ದ ಪೊಲೀಸರು 76 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಏಪ್ರಿಲ್ 8 2001ರಂದು 16 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಇದೇ ಪ್ರಕರಣ ಸಂಬಂಧ ಪ್ರಮುಖ ಅಪರಾಧಿಗಳಾಗಿದ್ದ ಹರ್ಕತ್ ಉಲ್ ಜಿಹಾದ್ ಇಸ್ಲಾಮಿ ಸಂಘಟನೆಯ ಬಾಂಗ್ಲಾ ಮುಖ್ಯಸ್ಥ ಮುಫ್ತಿ ಅಬ್ದುಲ್ ಹನನ್ 2017ರ ಏಪ್ರಿಲ್ 12ರಂದು ಗಲ್ಲಿಗೇರಿಸಲಾಗಿತ್ತು.

