2 ದಿನದ ಬಳಿಕ ಮತ್ತೆ ಗಡಿಯಲ್ಲಿ ಚೀನಾ ತಗಾದೆ; ಗಡಿಯಲ್ಲಿ ಸೇನೆಯಿಂದ ಗಸ್ತು

ಎರಡು ದಿನಗಳ ಹಿಂದಷ್ಟೇ ಡೋಕ್ಲಾಂ ಗಡಿಯಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದ ಚೀನಾ ಇದೀಗ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದೆ...
ಚೀನಾ ಸೇನೆ
ಚೀನಾ ಸೇನೆ
ಬೀಜಿಂಗ್: ಎರಡು ದಿನಗಳ ಹಿಂದಷ್ಟೇ ಡೋಕ್ಲಾಂ ಗಡಿಯಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದ ಚೀನಾ ಇದೀಗ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದೆ. 
ಇನ್ನೇನು ಡೋಕ್ಲಾಂ ವಿವಾದ ಬಗೆಹರಿಯಿತು ಎನ್ನುವಷ್ಟರಲ್ಲೇ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು, ಗಡಿ ಭಾಗದಲ್ಲಿ ಸೇನೆಯನ್ನು ಮತ್ತೆ ನಿಯೋಜಿಸಲಾಗುವುದು ಮತ್ತು ವಿವಾದದ ಪ್ರದೇಶದಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಲಾಗುವುದು ಎಂದು ಚೀನಾ ಹೇಳಿದೆ. 
ಡೋಕ್ಲಾಂನಲ್ಲಿ ಬೀಡು ಬಿಟ್ಟಿರುವ ಭಾರತ ಮತ್ತು ಚೀನಾ ಸೇನಾ ಪಡೆಗಳು ಗಡಿ ಪಹರೆಯಲ್ಲಿ ನಿರತವಾಗಿದೆ. ಇನ್ನು ಚೀನಾ ಮತ್ತೆ ಗಡಿಯಲ್ಲಿ ಸೇನೆಯನ್ನು ನಿಯೋಜಿಸಲು ಮುಂದಾಗಿರುವುದು ಮತ್ತೆ ಉದ್ವಿಗ್ನ ಸ್ಥಿತಿ ಭುಗಿಲೇಳುವ ಸಾಧ್ಯತೆ ಇದೆ. 
2 ತಿಂಗಳಿಗೂ ಅಧಿಕ ಕಾಲ ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಸಿಕ್ಕಿಂ ನ ಡೋಕ್ಲಾಂ ಗಡಿ ವಿವಾದಕ್ಕೆ ಕಳೆದ ಸೋಮವಾರ ತಾರ್ಕಿಕ ಅಂತ್ಯ ಹಾಕಲಾಗಿತ್ತು. ಉಭಯ ಸೇನಾಪಡೆಗಳು ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಿದ್ದವು. 
ಭಾರತ ಮತ್ತು ಚೀನಾ ರಾಯಭಾರ ಕಚೇರಿಗಳ ಮಟ್ಟದ ಸಂಧಾನ ಮಾತುಕತೆ ಕೊನೆಗೂ ಯಶಸ್ವಿಯಾಗಿತ್ತು. ಹೀಗಾಗಿ ವಿವಾದಿತ ಸಿಕ್ಕಿಂನ ಡೋಕ್ಲಾಂ ನಲ್ಲಿ ಬೀಡು ಬಿಟ್ಟಿದ್ದ ಉಭಯ ದೇಶಗಳ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಒಪ್ಪಿಗೆ ನೀಡಿದ್ದವು. ಅಂತೆ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದವು.
ಮುಂಬರುವ ಸೆಪ್ಟೆಂಬರ್ ನಲ್ಲಿ ಚೀನಾದಲ್ಲಿ ಬ್ರಿಕ್ಸ್ ಸಮಾವೇಶ ನಡೆಯಲಿದ್ದು, ಈ ಮಹತ್ವದ ಸಮಾವೇಶಕ್ಕೆ ಡೋಕ್ಲಾಂ ವಿವಾದದ ಕರಿ ನೆರಳು ಅಡ್ಡಿಯಾಗಬಹುದು ಎಂಬ ಶಂಕೆ ಮೇರೆಗೆ ಅಧಿಕಾರಿಗಳು ಸಂಧಾನ ನಡೆಸಿದ್ದರು. ಡೋಕ್ಲಾಂ ವಿವಾದ ಮುಂದುವರೆದಿದ್ದರೆ ಚೀನಾ ಬ್ರಿಕ್ಸ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗುವ ಸಾಧ್ಯತೆ ಇತ್ತು. ಹೀಗಾಗಿ ಚೀನಾ ಅನಿವಾರ್ಯವಾಗಿ ಡೋಕ್ಲಾಂ ವಿವಾದಕ್ಕೆ ತೆರೆ ಎಳೆಯಲೇಬೇಕಿತ್ತು. ಅದರಂತೆ ಇದೀಗ ಸಂಧಾನ ಯಶಸ್ವಿಯಾಗಿತ್ತು. ಆದರೆ ಇದೀಗ ಚೀನಾ ಮತ್ತೆ ಗಡಿಯಲ್ಲಿ ಸೇನೆ ನಿಯೋಜನೆಗೆ ಮುಂದಾಗಿರುವುದು ಬ್ರಿಕ್ಸ್ ಸಮಾವೇಶದ ಮೇಲೆ ಕರಿನೆರಳು ಮೂಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com