ವಿದೇಶ
ಭಾರತದೊಂದಿಗಿನ ಸಂಬಂಧ ಉತ್ತಮಪಡಿಸಿಕೊಳ್ಳಿ: ರಾಜಕಾರಣಿಗಳಿಗೆ ಪಾಕ್ ಸೇನಾ ಮುಖ್ಯಸ್ಥರ ಸಲಹೆ
ಭಾರತದೊಂದಿಗಿನ ಸಂಬಂಧವನ್ನು ಉತ್ತಮಪಡಿಸಿಕೊಳ್ಳುವಂತ ಗಮನ ಕೇಂದ್ರೀಕರಿಸಿ ಎಂದು ಪಾಕಿಸ್ತಾನದ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಪಾಕಿಸ್ತಾನ ಸೇನಾಧ್ಯಕ್ಷ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.
ಇಸ್ಲಾಮಾಬಾದ್: ಭಾರತದೊಂದಿಗಿನ ಸಂಬಂಧವನ್ನು ಉತ್ತಮಪಡಿಸಿಕೊಳ್ಳುವಂತ ಗಮನ ಕೇಂದ್ರೀಕರಿಸಿ ಎಂದು ಪಾಕಿಸ್ತಾನದ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಪಾಕಿಸ್ತಾನ ಸೇನಾಧ್ಯಕ್ಷ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.
ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಬಂಧದ ಕುರಿತು ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ ಬಜ್ವಾ, ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದ ಜನಪ್ರತಿನಿಧಿಗಳು ನೆರೆಯ ರಾಷ್ಟ್ರವಾದ ಭಾರತದೊಂದಿಗಿನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಬೇಕು. ಈ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರದ ಇಂತಹ ಯಾವುದೇ ಕಾರ್ಯಕ್ಕೂ ಪಾಕಿಸ್ತಾನ ಸೇನೆಯ ಸಹಮತವಿದ್ದೇ ಇರುತ್ತದೆ. ಇಂಡೋ-ಪಾಕ್ ಗಡಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದು ಬಜ್ವಾ ಹೇಳಿದ್ದಾರೆ.
ಇದೇ ವೇಳೆ ಭಾರತ ದೇಶ ಗಡಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಸೈನಿಕರ ನಿಯೋಜನೆ ಮಾಡುತ್ತಿದೆ. ಬಹುಶಃ ಇದು ನಮ್ಮ ಎದುರಾಗೇ ಇರಬೇಕು. ಗಡಿಯಲ್ಲಿ ನಾವು ಶಾಂತಿಪಾಲನೆಯಾಗಬೇಕು ಎಂದು ಆಶಿಸುತ್ತೇವೆ. ಇದಕ್ಕೆ ಭಾರತ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು, ಇದೇ ವೇಳೆ ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳಲ್ಲಿ ಭಾರತದ ನಂಟಿದೆ ಎಂದು ಆರೋಪಿಸಿರುವ ಬಜ್ವಾ, ಪಾಕಿಸ್ತಾನದಲ್ಲಿ ಅಶಾಂತಿ ಮೂಡಿಸುವ ಮೂಲಕ ಪಾಕಿಸ್ತಾನ ಸ್ಥಿರತೆಗೆ ಧಕ್ಕೆ ಭಾರತ ಸದಾ ಯತ್ನಿಸುತ್ತಿರುತ್ತದೆ ಎಂದೂ ಆರೋಪಿಸಿದರು. ಇದೇ ವೇಳೆ ಭಾರತ ಸರ್ಕಾರ ಆಫ್ಘಾನಿಸ್ತಾನ ಗುಪ್ತಚರ ಇಲಾಖೆಯ ನೆರವಿನ ಮೂಲಕ ಪಾಕಿಸ್ತಾನದಲ್ಲಿ ರಹಸ್ಯ ಬೇಹುಗಾರಿಕೆ ನಡೆಸುತ್ತಿದೆ ಎಂದು ಬಜ್ವಾ ಆರೋಪಿಸಿದರು.