'ಒಂದು ಚೀನಾ ನೀತಿ'ಯನ್ನು ಗೌರವಿಸುವುದಾಗಿ ಕ್ಸಿ ಅವರಿಗೆ ಭರವಸೆ ನೀಡಿದ ಟ್ರಂಪ್
ಬೀಜಿಂಗ್ ಮಾತ್ರ ಚೈನಾದ ನ್ಯಾಯಯುತ ಸರ್ಕಾರವೆಂದು ಪರಿಗಣಿಸುವ ಒಂದು ಚೀನಾ ನೀತಿಯನ್ನು ಗೌರವಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೈನಾ ಅಧ್ಯಕ್ಷ ಕ್ಷಿ ಜಿಂಪಿಂಗ್ ಅವರಿಗೆ ಹೇಳಿದ್ದಾರೆ
ವಾಷಿಂಗ್ಟನ್: ಬೀಜಿಂಗ್ ಮಾತ್ರ ಚೈನಾದ ನ್ಯಾಯಯುತ ಸರ್ಕಾರವೆಂದು ಪರಿಗಣಿಸುವ ಒಂದು ಚೀನಾ ನೀತಿಯನ್ನು ಗೌರವಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೈನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರಿಗೆ ಹೇಳಿದ್ದಾರೆ ಎಂದು ಶ್ವೇತ ಭವನ ಹೇಳಿಕೆ ಬಿಡುಗಡೆ ಮಾಡಿದೆ.
ಗುರುವಾರ ರಾತ್ರಿ ಎರಡು ದೇಶದ ನಾಯಕರು ದೂರವಾಣಿಯಲ್ಲಿ ಮಾತನಾಡಿದರು ಎಂದು ಹೇಳಿಕೆ ತಿಳಿಸಿದೆ. ಟ್ರಂಪ್ ಅಧಿಕಾರ ಸ್ವೀಕರಿಸಿದ ನಂತರ ಎರಡು ನಾಯಕರ ಮೊದಲ ದೂರವಾಣಿ ಕರೆ ಇದು.
"ಎರಡು ನಾಯಕರು ಹಲವಾರು ವಿಷಯಗಳನ್ನು ಚರ್ಚಿಸಿದರು ಮತ್ತು 'ಒಂದು ಚೀನಾ ನೀತಿಯನ್ನು' ಗೌರವಿಸಿಯುವಂತೆ ಮಾಡಿದ ಕ್ಸಿ ಮನವಿಯನ್ನು ಟ್ರಂಪ್ ಒಪ್ಪಿಕೊಂಡರು" ಎಂದು ಹೇಳಿಕೆ ತಿಳಿಸಿದೆ.
"ಎರಡು ದೇಶಗಳ ಹಿತಾಸಕ್ತಿಯ ವಿಷಯಗಳ ಆಬಗ್ಗೆ ಅಮೇರಿಕ ಮತ್ತು ಚೈನಾದ ಪ್ರತಿನಿಧಿಗಳ ನಡುವೆ ಚರ್ಚೆ ಮತ್ತು ಸಂಧಾನ ಕಾರ್ಯಗಳು ಮುಂದುವರಿಯಲಿವೆ" ಎಂದು ತಿಳಿಯಲಾಗಿದೆ.
ಈ ಹಿಂದೆ ತೈವಾನ್ ಅಧ್ಯಕ್ಷ ತ್ಸಾಯ್ ಇಂಗ್-ವೆನ್ ಅವರ ಕರೆ ಸ್ವೀಕರಿಸಿದ್ದ ಟ್ರಂಪ್ ಒಂದು ಚೀನಾ ನೀತಿ ಸೇರಿದಂತೆ ಎಲ್ಲವು ಸಂಧಾನ ಮಾತುಕತೆಯಲ್ಲಿದೆ ಎಂದಿದ್ದರು. ಇದಕ್ಕೆ ಚೈನಾ ಆಕ್ರೋಶ ವ್ಯಕ್ತಪಡಿಸಿತ್ತು.
ಗುರುವಾರ ರಾತ್ರಿಯ ದೂರವಾಣಿ ಕರೆ ಸುದೀರ್ಘವಾಗಿತ್ತು ಮತ್ತು ತುಂಬಾ ಆತ್ಮೀಯವಾಗಿತ್ತು ಎಂದು ಹೇಳಿಕೆ ಬಣ್ಣಿಸಿದ್ದು, ಎರಡೂ ರಾಷ್ಟ್ರದ ನಾಯಕರು ತಮ್ಮ ದೇಶದ ಪ್ರವಾಸಕ್ಕೆ ಪರಸ್ಪರ ಆಹ್ವಾನ ನೀಡಿದರು ಎಂದು ತಿಳಿಸಿದೆ.