ಲಂಡನ್: ವಿವಿಧ ಬ್ಯಾಂಕ್ ಗಳಿಂದ ಸುಮಾರು 9 ಸಾವಿರ ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಗುರುವಾರ ಲಂಡನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಹತ್ವ ವಿಚಾರಣೆ ನಡೆಯಿತು.
ವಿಜಯ್ ಮಲ್ಯ ಇಂದು ಮೂರನೇ ಬಾರಿ ಲಂಡನ್ ಕೋರ್ಟ್ ಗೆ ಹಾಜರಾಗಿ ವಿಚಾರಣೆ ಎದುರಿಸಿದರು. ವಿಚಾರಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, ನಾನು ನನ್ನ ವಕೀಲರು ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ ಎಂದರು.
ಇದು ಕೋರ್ಟ್, ಹೀಗಾಗಿ ನನ್ನ ವಿರುದ್ಧ ಅವರು ಯಾವ ಸಾಕ್ಷ್ಯಗಳನ್ನು ನೀಡುತ್ತಾರೆ ಎಂಬುದನ್ನು ನೋಡೋಣ ಮತ್ತು ನಾವು ನಮ್ಮ ವಾದವನ್ನು ಮಂಡಿಸುತ್ತೇವೆ ಎಂದು ಕೋರ್ಟ್ ಹೊರಗಡೆ ವರದಿಗಾರರಿಗೆ ವಿಜಯ್ ಮಲ್ಯ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಜಯ್ ಮಲ್ಯ ಹಸ್ತಾಂತರ ಕುರಿತು ಚರ್ಚಿಸಿದ್ದರು. ಆದರೆ, ಅವರನ್ನು ಭಾರತಕ್ಕೆ ಮರಳಿ ಕರೆತರುವ ವಿಷಯದಲ್ಲಿ ಕಾನೂನು ತೊಡಕುಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆ ಮಹತ್ವ ಪಡೆದುಕೊಂಡಿತ್ತು.