ಕಾಬೂಲ್'ನಲ್ಲಿ ಕಾರ್ ಬಾಂಬ್ ಸ್ಫೋಟ: 24 ಸಾವು, 42 ಜನರಿಗೆ ಗಾಯ

ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ 24 ಮಂದಿ ಸಾವನ್ನಪ್ಪಿ, 42ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಸೋಮವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ 24 ಮಂದಿ ಸಾವನ್ನಪ್ಪಿ, 42ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ. 

ಬಾಂಬ್ ದಾಳಿಯನ್ನು ಖಚಿತಪಡಿಸಿರುವ ಕಾಬೂಲ್ ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ದಾನಿಶ್ ಅವರು, ಬಸ್ ವೊಂದು ನೌಕರರನ್ನು ಹೊತ್ತು ಸಾಗುತ್ತಿದ್ದ ವೇಳೆ ಕಾರ್ ಬಾಂಬ್ ದಾಳಿ ನಡೆಸಲಾಗಿದೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಪಶ್ಚಿಮ ಕಾಬೂಲ್ ನಲ್ಲಿ ಉಗ್ರರು ದಾಳಿ ನಡೆಸಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ಸರ್ಕಾರದ ಉಪ ಕಾರ್ಯಕಾರಿ ಮುಖ್ಯಸ್ಥ ಮಹಮ್ಮದ್ ಮೊಹಾಕಿಕ್ ಅವರ ನಿವಾಸದ ಬಳಿಯೇ ಈ ದಾಳಿಯನ್ನು ನಡೆಸಲಾಗಿದ್ದು, ಶಿಯಾ ಹಜಾರಾ ಸಮುದಾಯದವರ ಪ್ರಾಬಲ್ಯವಿರುವ ಪ್ರದೇಶ ಇದಾಗಿದೆ ಎಂದು ಎಂದು ತಿಳಿಸಿದ್ದಾರೆ. 

ಮೊಹಾಕಿಕ್ ಅವರ ಮನೆಯ ಮೇಲೆಯೇ ದಾಳಿ ನಡೆಸಲು ಯತ್ನ ನಡೆಸಲಾಗಿದೆ. ಆದರೆ, ಭದ್ರತಾ ಸಿಬ್ಬಂದಿಗಳು ತಡೆದ ಹಿನ್ನಲೆಯಲ್ಲಿ ನಾಗರೀಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ ಎಂದಿದ್ದಾರೆ. 

ಕಾಬೂಲ್ ನಲ್ಲಿ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, 2017ರಲ್ಲಿ ಈ ವರೆಗೂ ನಡೆದಿರುವ ಆತ್ಮಾಹುತಿ ದಾಳಿಯಲ್ಲಿ ಶೇ.20 ರಷ್ಟು ನಾಗರಿಕರು ಬಲಿಯಾದ್ದಾರೆ. ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ಟ್ರಕ್ ಬಾಂಬ್ ದಾಳಿಗೆ 150 ಜನರು ಸಾವನ್ನಪ್ಪಿದ್ದರು ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com