ಕ್ಯಾನ್ಬೆರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದರೆ, ಚೀನಾ ವಿರುದ್ಧ ಪರಮಾಣು ಅಸ್ತ್ರ ಪ್ರಯೋಗಕ್ಕೆ ಸಿದ್ಧವಿದ್ದೇವೆ ಎಂದು ಅಮೆರಿಕ ಅಡ್ಮಿರಲ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಸೇನಾ ತಾಲೀಮು ನಡೆಸಿದ ನಂತರ ನಡೆದ ಆಸ್ಟ್ರೇಲಿಯದ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅಮೆರಿಕ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಅಮೆರಿಕ ಅಧ್ಯಕ್ಷರು ಆದೇಶ ನೀಡಿದರೆ ಚೀನಾ ಮೇಲೆ ಪರಮಾಣು ಅಸ್ತ್ರ ಪ್ರಯೋಗ ಮಾಡುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ಅಮೆರಿಕ ಅಧ್ಯಕ್ಷರು ಚೀನಾ ಮೇಲೆ ದಾಳಿ ನಡೆಸುವಂತೆ ಆದೇಶ ನೀಡಿದರೆ ದಾಳಿ ನಡೆಸುತ್ತೀರಾ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಅಮೆರಿಕ ಅಡ್ಮಿರಲ್ ನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, ಅಮೆರಿಕ ಅಧ್ಯಕ್ಷರಿಂದ ಆದೇಶ ಬಂದರೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶತ್ರುಗಳಿಂದ ದೇಶದ ಸಂವಿಧಾನವನ್ನು ರಕ್ಷಿಸುವುದಾಗಿ ಅಮೆರಿಕ ಸೇನೆಯ ಎಲ್ಲಾ ಸದಸ್ಯರೂ ಪ್ರಮಾಣ ಸ್ವೀಕರಿಸಿರುತ್ತಾರೆ, ಆದ್ದರಿಂದ ಅಧ್ಯಕ್ಷರ ಮಾತನ್ನು ಗೌರವಿಸುವುದು ಕರ್ತವ್ಯವಾಗಿರಲಿದೆ ಎಂದು ಸ್ವಿಫ್ಟ್ ತಿಳಿಸಿದ್ದಾರೆ.