ವಾಷಿಂಗ್ಟನ್: ಪೂರ್ವ ಆಫ್ಘಾನಿಸ್ಥಾನದಲ್ಲಿ ಮೂವರು ಅಮರಿಕ ಸೈನಿಕರನ್ನು ಹತ್ಯೆ ಮಾಡಲಾಗಿದ್ದು, ಒಬ್ಬ ಸೈನಿಕ ಗಾಯಗೊಂಡಿರುವುದಾಗಿ ಶನಿವಾರ ಅಮರಿಕ ಭದ್ರತಾ ಇಲಾಖೆ ಧೃಢೀಕರಿಸಿದೆ.
ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಪೆಂಟಗನ್ ಸಾವು ನೋವಿನ ವಿವರಗಳನ್ನಷ್ಟೇ ತಿಳಿಸಿದೆ. "ಈ ಘಟನೆಯನ್ನು ತನಿಖೆ ಮಾಡುತ್ತಿದ್ದೇವೆ. ಸರಿಯಾದ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ನೀಡುತ್ತೇವೆ" ಎಂದಿದ್ದಾರೆ.
ಆದರೆ ಪ್ರಾದೇಶಿಕ ಮೂಲಗಳ ಪ್ರಕಾರ ಇದು ಒಳಗಿಂದಲೇ ನಡೆದ ದಾಳಿಯಾಗಿದ್ದು, ಆಫ್ಘಾನಿಸ್ಥಾನದ ಸೈನಿಕ ಅಮೆರಿಕಾದ ಸೈನಿಕರನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿ ಎನ್ನಲಾಗಿದೆ.
"ಇದು ಅಚಿನ್ ಜಿಲ್ಲೆಯಲ್ಲಿ ನಡೆದಿದ್ದು, ಅಮೆರಿಕಾ ಸೈನಿಕರ ಮೇಲೆ ದಾಳಿ ಮಾಡಿದ ಆಫ್ಘಾನಿಸ್ಥಾನದ ಕಮಾಂಡೋನನ್ನು ಕೂಡ ಹತ್ಯೆ ಮಾಡಲಾಗಿದೆ" ಎಂದು ಪ್ರಾಂತೀಯ ಗವರ್ನರ್ ವಕ್ತಾರ ಅತಾವುಲ್ಲಾ ಖೋಗ್ಯಾನಿ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಫ್ಘಾನಿಸ್ತಾನದಲ್ಲಿ ಅಮೆರಿಕಾ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಲಿರುವ ಬಗ್ಗೆ ಹೇಳಿಕೆ ನೀಡಿದ ಮೇಲೆ ಈ ದಾಳಿ ನಡೆದಿದೆ.
ಸದ್ಯಕ್ಕೆ ಅಮೆರಿಕಾದ ೮೪೦೦ ಜನ ಸೈನಿಕರ ಪಡೆ ಮತ್ತು ನ್ಯಾಟೋದ ೫೦೦೦ ಜನ ಸೈನಿಕರ ಪಡೆ ಆಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದು, ತಾಲಿಬಾನ್ ಭಯೋತ್ಪಾದನೆಯ ವಿರುದ್ಧ ಹೋರಾಡಲು ಆಫ್ಘಾನಿಸ್ಥಾನ ಮಿಲಿಟರಿಗೆ ತರಬೇತಿ ನೀಡುತ್ತವೆ.