ಲಂಡನ್: ಮಸೀದಿ ಬಳಿ ಜನರ ಮೇಲೆ ಹರಿದ ವಾಹನ- ಓರ್ವ ಸಾವು, 8 ಜನರಿಗೆ ಗಾಯ

ಉತ್ತರ ಲಂಡನ್'ನ ಮಸೀದಿಯೊಂದರ ಬಳಿ ಪಾದಚಾರಿಗಳ ಮೇಲೆ ವಾಹನವೊಂದು ಹರಿದಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ...
ಘಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಂತಿರುವುದು
ಘಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಂತಿರುವುದು
ಲಂಡನ್: ಉತ್ತರ ಲಂಡನ್'ನ ಮಸೀದಿಯೊಂದರ ಬಳಿ ಪಾದಚಾರಿಗಳ ಮೇಲೆ ವಾಹನವೊಂದು ಹರಿದಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ 8 ಜನರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ. 
ಫಿನ್ಸ್ಬುರಿ ಪಾರ್ಕ್ ಮಸೀದಿ ಬಳಿಯಿರುವ ಮುಸ್ಲಿಮ್ ವೆಲ್ಫೇರ್ ಹೌಸ್ ಬಳಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ನೆರೆದಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ವಾಹನವೊಂದು ಏಕಾಏಕಿ ಜನರ ಮೇಲೆ ಹರಿದಿದೆ. 
ಮಸೀದಿಯಿಂದ ಹೊರ ಬರುತ್ತಿದ್ದಂತೆಯೇ ಜನರ ಮೇಲೆ ವಾಹನ ಹರಿದಿತ್ತು. ಸಂತ್ರಸ್ತರ ಕುರಿತಂತೆ ನಾವು ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಬ್ರಿಟನ್ ಮುಸ್ಲಿಂ ಮಂಡಳಿ (ಎಂಸಿಬಿ) ಟ್ವಿಟರ್ ನಲ್ಲಿ ಹೇಳಿಕೊಂಡಿದೆ. 

ಬ್ರಿಟನ್ ಮುಸ್ಲಿಂ ಮಂಡಳಿ ಮುಖ್ಯಸ್ಥ ಹರುನ್ ಖಾನ್ ಮಾತನಾಡಿ, ರಂಜಾನ್ ಪ್ರಯುಕ್ತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಮುಸ್ಲಿಮರ ಮೇಲೆ ವಾಹನವನ್ನು ಹರಿಸಲಾಗಿದೆ ಎಂದು ಹೇಳಿದ್ದಾರೆ. 

ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಬಹು ಸಂಖ್ಯೆಯಲ್ಲಿ ವೈದ್ಯರು ಹಾಗೂ ತುರ್ತುಚಿಕಿತ್ಸಾ ವಾಹನಗಳು ಬಂದಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಹಿನ್ನಲೆಯಲ್ಲಿ ಲಂಡನ್ ನ ಹಲವೆಡೆ ಸಂಚಾರ ದಟ್ಟಣೆ ಕೂಡ ನಿರ್ಮಾಣವಾಗಿದೆ ಎಂದು ವರದಿಗಳು ತಿಳಿಸಿವೆ. 

ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ .ಪ್ರಸ್ತುತ ವಾಹನ ಚಾಲಕನನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com