
ಇಸ್ಲಾಮಾಬಾದ್: ಮುಂಬೈ ಮೇಲೆ ದಾಳಿ ಮಾಡಿದ ಅಜ್ಮಲ್ ಕಸಬ್ ಗಿಂತ ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಭಾರತ ಕುಲಭೂಷಣ್ ಜಾಧವ್ ಅತ್ಯಂತ ಅಪಾಯಕಾರಿ ಎಂದು ಪಾಕ್ ಮಾಜಿ ಆಧ್ಯಕ್ಷ ಫರ್ವೇಜ್ ಮುಷರಫ್ ಹೇಳಿದ್ದಾರೆ.
ಕುಲಭೂಷಣ್ ಜಾದವ್ ಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮುಷರಫ್, "ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ಗಿಂತ ಅಪಾಯಕಾರಿ. ಕಸಬ್ ಕೇವಲ ಮುಂಬೈ ಮೇಲೆ ದಾಳಿ ಮಾಡಿದವರ ಪೈಕಿ ಓರ್ವನಾಗಿದ್ದ. ಆದರೆ, ಜಾಧವ್ ಗೂಢಚಾರಿಯಾಗಿದ್ದು, ಪಾಕಿಸ್ತಾನದಲ್ಲಿ ಭಯೊತ್ಪಾದನೆ ಉತ್ತೇಜಿಸುವ ಮತ್ತು ಬೇಹುಗಾರಿಕೆ ಚಟುವಟಿಕೆಗಳ ಮೂಲಕ ನೂರಾರು ಜನರ ಸಾವಿಗೆ ಕಾರಣನಾಗಬಲ್ಲ ವ್ಯಕ್ತಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಅಂತೆಯೇ ದೇಶದ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ರಾಜಿ ಸಹಿಸಲಸಾಧ್ಯ. ದೇಶದ ಭದ್ರತೆ ವಿಚಾರದಲ್ಲಿ ಯಾರೂ ಆದೇಶ ಮಾಡುವ ಹಾಗಿಲ್ಲ ಎಂದು ಮುಷರಫ್ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2001ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ನಿಯೋಜನೆಗೊಂಡ ಮುಷರಫ್ ಮೇಲೆ ಆಡಳಿತ ದುರ್ಬಳಕೆ ಹಾಗೂ ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದಾರೆ ಎಂಬ ದೇಶದ್ರೋಹ ಪ್ರಕರಣ ದಾಖಲಾಗಿದೆ. ಸ್ವತಃ ಪಾಕಿಸ್ತಾನ ಸುಪ್ರೀಂ ಕೋರ್ಟ್ ಈ ಬಗ್ಗೆ ಮುಷರಫ್ ಗೆ ಈ ಹಿಂದೆ ಛೀಮಾರಿ ಹಾಕಿದೆ. ಹೀಗಿರುವಾಗ ಮುಷರಫ್ ಪಾಕಿಸ್ತಾನದ ಆಂತರಿಕ ಭದ್ರತೆ ಕುರಿತಂತೆ ಪಾಠ ಮಾಡುತ್ತಿದ್ದಾರೆ.
Advertisement