ಫಿಲಿಪ್ಪೈನ್ಸ್ ಎಡವಟ್ಟು; ಇಸಿಸ್ ಉಗ್ರರ ಮೇಲೆ ಎಸೆಯಬೇಕಿದ್ದ ಬಾಂಬ್ ಯೋಧರ ಮೇಲೆ ಬಿತ್ತು!

ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಫಿಲಿಪ್ಪೈನ್ಸ್ ಸೇನೆ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಉಗ್ರ ನೆಲೆಗಳ ಮೇಲೆ ಎಸೆಯ ಬೇಕಿದ್ದ ಬಾಂಬ್ ಅನ್ನು ಸೇನಾ ನೆಲೆಗಳ ಮೇಲೆ ಎಸೆದ ಪರಿಣಾಮ 10 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮನಿಲಾ: ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಫಿಲಿಪ್ಪೈನ್ಸ್ ಸೇನೆ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಉಗ್ರ ನೆಲೆಗಳ ಮೇಲೆ ಎಸೆಯ ಬೇಕಿದ್ದ ಬಾಂಬ್ ಅನ್ನು ಸೇನಾ ನೆಲೆಗಳ ಮೇಲೆ  ಎಸೆದ ಪರಿಣಾಮ 10 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.

ಫಿಲಿಪ್ಪೈನ್ಸ್ ನ ಮಿರಾವಿ ನಗರದ ಇಸ್ಲಾಮಿಕ್ ಸ್ಟೇಟ್ ಉಗ್ರ ನೆಲೆಗಳ ಮೇಲೆ ನಿನ್ನೆ ಫಿಲಿಪ್ಪೈನ್ಸ್ ಸೇನೆ ಕಾರ್ಯಾಚರಣೆ ನಡೆಸಿತ್ತು. ಭೂ ಮಾರ್ಗ ಮತ್ತು ವಾಯುಮಾರ್ಗವಾಗಿ ದಾಳಿ ಮಾಡಿತ್ತು. ಈ ವೇಳೆ ಫಿಲಿಪ್ಪೈನ್ಸ್ ಸೇನೆಯ ಎಸ್  ಎಫ್ 260 ಸರಣಿಯ ಎರಡು ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸುತ್ತಿದ್ದವು. ಮೊದಲ ವಿಮಾನ ಉಗ್ರರ ನೆಲೆಗಳ ಮೇಲೆ ಬಾಂಬ್ ಎಸೆದಿತ್ತಾದರೂ, ಎರಡನೇ ವಿಮಾನ ಮಾತ್ರ ಬಾಂಬ್ ಅನ್ನು ತಪ್ಪಾದ ಪ್ರದೇಶದಲ್ಲಿ  ಎಸೆದಿತ್ತು. ಪರಿಣಾಮ ಭೂಮಾರ್ಗದಲ್ಲಿದ್ದ ತನ್ನದೇ ಸೇನೆಯ ಸುಮಾರು 10 ಮಂದಿ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, 7 ಮಂದಿ ಸೈನಿಕರು ಗಂಭೀರವಾಗಿ ಗಾಯಗೊಂಡರು.

ಕೂಡಲೇ ಗಾಯಾಳು ಸೈನಿಕರನ್ನು ಸಮೀಪದ ಶಿಬಿರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ತನ್ನದೇ ಸೈನಿಕರ ಮೇಲೆ ನಡೆದ ಬಾಂಬ್ ದಾಳಿಯನ್ನು ಫಿಲಿಪ್ಪೈನ್ಸ್ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಾದ  ಪ್ರದೇಶದಲ್ಲಿ ಬಾಂಬ್ ಬಿಡುಗಡೆ ಮಾಡುವಂತೆ ಪೈಲಟ್ ಗೆ ಸೂಚನೆ ನೀಡಿದ್ದು ಯಾರು ಎಂಬ ವಿಚಾರದ ಕುರಿತು ತನಿಖೆ ಆದೇಶಿಸಿದೆ. ಅಲ್ಲದೆ ಪೈಲಟ್ ಬೇಕೆಂದೇ ಕಪ್ಪಾದ ಪ್ರದೇಶದ ಮೇಲೆ ಬಾಂಬ್ ಪ್ರಯೋಗಿಸಿದನೇ ಅಥವಾ  ಆತನಿಗೆ ಯಾರಾದರು ತಪ್ಪು ಮಾಹಿತಿ ನೀಡಿದರೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಫಿಲಿಪ್ಪೈನ್ಸ್ ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ತಿಳಿಸಿದ್ದಾರೆ.

ಇದೊಂದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದ್ದು, ನಮ್ಮದೇ ಸೈನಿಕರ ಮೇಲೆ ನಮ್ಮ ಯುದ್ಧ ವಿಮಾನವೇ ಬಾಂಬ್ ದಾಳಿ ನಡೆಸಿದೆ. ಪ್ರಕರಣದಲ್ಲಿ ಗಂಭೀರ ಪ್ರಮಾದವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು  ಲೊರೆಂಜಾನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com