ಸಾಕ್ಷ್ಯಾಧಾರ ಕೊಡದಿದ್ದರೆ ಹಫೀಜ್ ಬಿಡುಗಡೆ ಮಾಡುತ್ತೇವೆ: ಲಾಹೋರ್ 'ಹೈ' ಎಚ್ಚರಿಕೆ

ಜಮಾತ್ ಉದ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾಗದ್ದಾನೆ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಹಾಜರುಪಡಿಸದೇ ಇದ್ದಲ್ಲಿ, ಆತನನ್ನು ಬಿಡುಗಡೆ ಮಾಡುತ್ತೇವೆಂದು ಲಾಹೋರ್ ಹೈಕೋರ್ಟ್...
ಜಮಾತ್ ಉದ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್
ಜಮಾತ್ ಉದ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್

ಲಾಹೋರ್: ಜಮಾತ್ ಉದ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾಗದ್ದಾನೆ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಹಾಜರುಪಡಿಸದೇ ಇದ್ದಲ್ಲಿ, ಆತನನ್ನು ಬಿಡುಗಡೆ ಮಾಡುತ್ತೇವೆಂದು ಲಾಹೋರ್ ಹೈಕೋರ್ಟ್ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 

ಸಯೀದ್ ಮತ್ತು ಇತರೆ ನಾಲ್ವರನ್ನು ಗೃಹಬಂಧನಕ್ಕೆ ಒಳಪಡಿಸಿರುವ ಪ್ರಕರಣದ ವಿಚಾರಣೆಯನ್ನು ನಿನ್ನೆ ನಡೆಸಲಾಗುತ್ತಿತ್ತು. ಆಧರೆ, ವಿಚಾರಣೆ ವೇಳೆ ಸರ್ಕಾರಿ ವಕೀಲರು ಗೈರು ಹಾಜರಾಗಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಯಾವುದೇ ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು ಸಾಧ್ಯವಿಲ್ಲ ಎಂದು ಹೇಳಿದೆ. 

ಕಳೆದ ಜ.31 ರಿಂದೂ ಹಫೀಜ್ ಪಾಕಿಸ್ತಾನದಲ್ಲಿ ಗೃಹ ಬಂಧನದಲ್ಲಿದ್ದಾನೆ. ತನ್ನ ಬಂಧನವನ್ನು ಪ್ರಶ್ನಿಸಿ ಹಫೀಜ್ ಲಾಹೋರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲಿದಿದ್ದರೂ ಬಂಧನದಲ್ಲಿ ಇಡಲಾಗಿದೆ ಎಂದು ಹಫೀಜ್ ವಾದಿಸಿದ್ದ. ಈ ಹಿನ್ನಲೆಯಲ್ಲಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆತನ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು. 

ನಿನ್ನೆ ನಡೆದ ವಿಚಾರಣೆ ವೇಳೆ ನ್ಯಾಯಾಲಯದ ಆದೇಶದಂತೆ ಪಾಕಿಸ್ತಾನ ಆಂತರಿಕ ಸಚಿವಾಲಯದ ಕಾರ್ಯದರ್ಶಿಯವರು ಕೋರ್ಟ್'ಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಒದಗಿಸಬೇಕಿತ್ತು. ಆದರೆ, ಗೈರು ಹಾಜರಾಗಿದ್ದರು. ಇದರಿಂದ ನ್ಯಾಯಮೂರ್ತಿ ಸಯೀದ್ ಮಜಹರ್ ಅಲಿ ಅಕ್ಬರ್ ನಖ್ವಿಯವರು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದರು. 

ಕೇವಲ ಮಾಧ್ಯಮಗಳು ನೀಡಿರುವ ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಹಫೀಜ್ ನನ್ನು ಗೃಹ ಬಂಧನದಲ್ಲಿರಿಸಲು ಸಾಧ್ಯವಿಲ್ಲ. ಸರ್ಕಾರದ ಬೇಜವಾಬ್ದಾರಿಯ ವರ್ತನೆ ನೋಡಿದರೆ ಆರೋಪಿಯ ವಿರುದ್ಧ ಅದರ ಬಳಿ ಯಾವುದೇ ದಾಖಲೆಗಳಿಲ್ಲ ಎಂದೆನಿಸುತ್ತಿದೆ. ಆರೋಪಿಯ ಪರ ವಕೀಲ ಕೂಡ ಮೇಲಿಂದ ಮೇಲೆ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸುತ್ತಾ ಬಂದಿದ್ದಾರೆ. ಹೀಗಾಗಿ ಸರ್ಕಾರ ಸಾಕ್ಷ್ಯಾಧಾರಗಳನ್ನು ಒದಗಿಸಿದೇ ಹೋದಲ್ಲಿ ಹಫೀಜ್ ಬಿಡುಗಡೆಗೆ ಆದೇಶ ಹೊರಡಿಸದೇ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿಚಾರಣೆಯನ್ನು 13ಕ್ಕೆಮುಂದೂಡಿದ್ದು, ಸಾಕ್ಷ್ಯಾಧಾರ ಒದಗಿಸಲು ಸರ್ಕಾರಕ್ಕೆ ಮತ್ತೊಂದು ಅವಕಾಶವನ್ನು ನೀಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com