ಮೂಲಗಳ ಪ್ರಕಾರ ಪ್ರಸ್ತುತ ಬಾಂಗ್ಲಾದೇಶದ ವಿವಿಧ ನಿರಾಶ್ರಿತ ಶಿಬಿರಗಳಿಗೆ ಈಗಾಗಲೇ ಸುಮಾರು 6 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಂ ನಿರಾಶ್ರಿತರು ವಲಸೆ ಬಂದಿದ್ದು, ದಿನೇ ದಿನೇ ಈ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರುತ್ತಿದೆ. ಹೀಗಾಗಿ ನಿರಾಶ್ರಿತ ಶಿಬಿರಗಳಲ್ಲಿ ಉಳಿಯಲು ಸ್ಥಳಾವಕಾಶವಿಲ್ಲದೇ ಅಲ್ಲಿನ ಜನರು ಪರದಾಡುವಂತಾಗಿದೆ. ಇದು ಬಾಂಗ್ಲಾದೇಶ ಸರ್ಕಾರಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಶಿಬಿರಗಳಲ್ಲಿರುವ ನಿರಾಶ್ರಿತರಿಗೆ ಆಹಾರ, ಬಟ್ಟೆ ಮತ್ತು ಇತರೆ ಮೂಲಭೂತ ಸೌಕರ್ಯ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ನಿರಾಶ್ರಿತರಿಗಾಗಿ ಮೀಸಲಿಟ್ಟಿದ್ದ ವೈದ್ಯಕೀಯ ಪರಿಕರಗಳ ಕೊರತೆ ಕೂಡ ಉಂಟಾಗಿದೆ.