ಕೇಂಬ್ರಿಡ್ಜ್ ಅನಲಿಟಿಕಾಗೆ 8.7 ಕೋಟಿ ಬಳಕೆದಾರರ ಮಾಹಿತಿ ಹಂಚಿಕೆಯಾಗಿದೆ: ಫೇಸ್ ಬುಕ್

2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಡ್ಜ್ ಅನಲಿಟಿಕಾ ಜೊತೆ ಬರೊಬ್ಬರಿ 8.7 ಕೋಟಿ ಬಳಕೆದಾರರ ದತ್ತಾಂಶಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಫೇಸ್‌ಬುಕ್ ಸಂಸ್ಥೆ ಒಪ್ಪಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: 2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಡ್ಜ್ ಅನಲಿಟಿಕಾ ಜೊತೆ  ಬರೊಬ್ಬರಿ 8.7 ಕೋಟಿ ಬಳಕೆದಾರರ ದತ್ತಾಂಶಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಫೇಸ್‌ಬುಕ್ ಸಂಸ್ಥೆ ಒಪ್ಪಿಕೊಂಡಿದೆ.
ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಹಗರಣ ಹೊರ ಬಿದ್ದ ಬಳಿಕ ಇದೇ ಮೊದಲ ಬಾರಿಗೆ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ದತ್ತಾಂಶ ಸೋರಿಕೆ ಸಂಬಂಧ ಮಾಹಿತಿ ಹೊರ ಹಾಕಿದ್ದು, 2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸುಮಾರು 8.7 ಕೋಟಿ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು ಎಂದು ಹೇಳಿದೆ.
ಈ ಹಿಂದೆ ಅಂದರೆ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಸುಮಾರು 5 ಕೋಟಿ ಬಳಕೆದಾರರ ದತ್ತಾಂಶ ಹಂಚಿಕೊಂಡ ಬಗ್ಗೆ ಅಂದಾಜಿಸಲಾಗಿತ್ತು. ಆದರೆ ಈ ಪ್ರಮಾಣ ಮುಕ್ಕಾಲು ಪಟ್ಟು ಹೆಚ್ಚಾಗಿದ್ದು, 8.7 ಕೋಟಿ ಬಳಕೆಗಾರರ ದತ್ತಾಂಶ ಹಂಚಿಕೊಂಡ ಬಗ್ಗೆ ಫೇಸ್‌ಬುಕ್ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದೆ.
ಮಾಹಿತಿ ಸೋರಿಕೆ ಅಥವಾ ಹಂಚಿಕೆಗೆ ಕಡಿವಾಣ ಹಾಕಲು ವರ್ಷಗಳೇ ಬೇಕಾಗಬಹುದು
ದತ್ತಾಂಶ ಸೋರಿಕೆ ಸಂಬಂಧ ಫೇಸ್ ಬುಕ್ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಅವರು ಮಾಹಿತಿ ನೀಡಿದ್ದು, ಅಲ್ಲದೆ ಮಾಹಿತಿ ಸೋರಿಕೆ ಅಥವಾ ಹಂಚಿಕೆಗೆ ಕಡಿವಾಣ ಹಾಕಲು ವರ್ಷಗಳೇ ಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ, ಯುರೋಪ್‌ನ ಖಾಸಗಿತನದ ನಿಯಮಗಳ ಪ್ರಕಾರವೇ ಎಲ್ಲ ಬಳಕೆದಾರರಿಗೂ ಟೂಲ್‌ಗಳನ್ನು ಒದಗಿಸುವುದಾಗಿ ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್‌ ಘೋಷಿಸಿದ್ದಾರೆ. ತಮ್ಮ ಡಿಜಿಟಲ್ ದತ್ತಾಂಶವನ್ನು ಕಂಪೆನಿಗಳು ಉಪಯೋಗಿಸುವುದರ ಮೇಲೆ ಜನರಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ಯುರೋಪ್‌ನ ಖಾಸಗಿತನದ ನಿಯಮಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.
ಫೇಸ್‌ಬುಕ್‌ ಖಾತೆದಾರರ ಮಾಹಿತಿಗೆ ಕನ್ನ ಹಾಕಿ ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಹೊತ್ತಿರುವ ಕೇಂಬ್ರಿಡ್ಜ್ ಅನಲಿಟಿಕಾ ಕಂಪನಿಯ ಸೇವೆಗೆ ಸಂಬಂಧಿಸಿ ಭಾರತದಲ್ಲಿಯೂ ಇತ್ತೀಚೆಗೆ ವ್ಯಾಪಕ ಚರ್ಚೆಯಾಗಿತ್ತು. ಕೇಂಬ್ರಿಡ್ಜ್ ಅನಲಿಟಿಕಾದ ಭಾರತೀಯ ಸಹವರ್ತಿ ಕಂಪನಿ ‘ಒಬಿಐ’ನ ಸೇವೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಜತೆಗೆ, ಭಾರತದ ಬಳಕೆದಾರರ ಮಾಹಿತಿ ಹಂಚಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫೇಸ್‌ಬುಕ್‌ಗೆ ಎಚ್ಚರಿಕೆಯನ್ನೂ ನೀಡಿದ್ದರು. 2010ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ– ಜೆಡಿಯು, ಕೇಂಬ್ರಿಡ್ಜ್ ಅನಲಿಟಿಕಾ ಮತ್ತು ಒಬಿಐನ ಸೇವೆ ಪಡೆದುಕೊಂಡಿವೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com