ರೆಡ್ ಲೈಟ್ ಏರಿಯಾಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಪಾಕ್ ಪೊಲೀಸರ ಅಟ್ಟಾಡಿಸಿ ಹೊಡೆದ ಚೀನೀಯರು!

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ಮೂಲಕ ಇದೀಗ ಉಭಯ ದೇಶಗಳ ತೀವ್ರ ಮುಜುಗರಕ್ಕೊಳಗಾಗುವ ಸನ್ನಿವೇಶವೊಂದು ಸೃಷ್ಟಿಯಾಗಿದ್ದು, ಪಾಕಿಸ್ತಾನದಲ್ಲಿರುವ ರೆಡ್ ಲೈಟ್ ಏರಿಯಾಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಪಾಕ್ ಪೊಲೀಸರ ಚೀನಿಯರು ಅಟ್ಟಾಡಿಸಿ ಹೊಡೆದ ಘಟನೆ ನಡೆದಿದೆ.
ಪಾಕ್ ಪೊಲೀಸರ ಮೇಲೆ ಚೀನಿಯರ ಹಲ್ಲೆ
ಪಾಕ್ ಪೊಲೀಸರ ಮೇಲೆ ಚೀನಿಯರ ಹಲ್ಲೆ
ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ಮೂಲಕ ಇದೀಗ ಉಭಯ ದೇಶಗಳ ತೀವ್ರ ಮುಜುಗರಕ್ಕೊಳಗಾಗುವ ಸನ್ನಿವೇಶವೊಂದು ಸೃಷ್ಟಿಯಾಗಿದ್ದು, ಪಾಕಿಸ್ತಾನದಲ್ಲಿರುವ ರೆಡ್ ಲೈಟ್ ಏರಿಯಾಗೆ ಹೋಗಲು ಅವಕಾಶ ನೀಡಲಿಲ್ಲ ಎಂದು ಪಾಕ್ ಪೊಲೀಸರ ಚೀನಿಯರು ಅಟ್ಟಾಡಿಸಿ ಹೊಡೆದ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಕಾರ್ಯಕ್ಷೇತ್ರವೊಂದರಲ್ಲಿ ಚೀನೀಯರು ಮತ್ತು ಪಾಕಿಸ್ತಾನಿ ಪೊಲೀಸರ ನಡುವೆ ಮಾರಾಮಾರಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಪೊಲೀಸರು ತಮ್ಮ ಕರ್ತವ್ಯ ಮರೆತು ಎಲ್ಲರೂ ಸಾಮೂಹಿಕವಾಗಿ ಹೊಡೆದಾಡಿಕೊಳ್ಳುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೇವಾಲ್‌ ನಲ್ಲಿ ನಡೆದಿದೆ.
ಚೀನೀಯರು ಪಾಕಿಸ್ತಾನಿ ಪೊಲೀಸರಿಗೆ ಅಟ್ಟಾಡಿಸಿ ಹೊಡೆಯುತ್ತಿದ್ದು, ಚೀನಿಯರ ದಾಳಿ ತಾಳಲಾರದೆ ಪಾಕಿಸ್ತಾನ ಪೊಲೀಸರು ರಕ್ಷಣೆಗಾಗಿ ಓಡುವುದನ್ನು ವೀಡಿಯೊದಲ್ಲಿ ದಾಖಲಾಗಿದೆ.
ಇಷ್ಟಕ್ಕೂ ಏನಾಯಿತು?
ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ ಯೋಜನೆ ನಿಮಿತ್ತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೇವಾಲ್‌ ನಲ್ಲಿ ಚೀನೀ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೂರದ ಚೀನಾದಿಂದ ಪುರುಷ ಕಾರ್ಮಿಕರು ತಮ್ಮ ಪತ್ನಿ ಮತ್ತು ಕುಟುಂಬವನ್ನು ಬಿಟ್ಟು ಪಾಕಿಸ್ತಾನಕ್ಕೆ ಬಂದಿದ್ದಾರೆ. ಈ ವೇಳೆ ಕೆಲ ಕಾರ್ಮಿಕರು ಸಮೀಪದಲ್ಲಿರುವ ಪಾಕಿಸ್ತಾನದ ರೆಡ್ ಲೈಟ್ ಏರಿಯಾ (ವೇಶ್ಯೆಯರ ಪ್ರದೇಶ)ಗೆ ತೆರಳಲು ಮುಂದಾಗಿದ್ದಾರೆ. ಆದರೆ ಅಲ್ಲಿನ ಪೊಲೀಸರು ಭದ್ರತಾ ಕಾರಣವೊಡ್ಡಿ ಕಾರ್ಮಿಕರು ಎಲ್ಲಿಗೂ ತೆರಳದಂತೆ ತಡೆದಿದ್ದಾರೆ. ಇದರಿಂದ ಕುಪಿತಗೊಂಡ ಕಾರ್ಮಿಕರು ಪೊಲೀಸರನ್ನು ನಿಂದಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಪೊಲೀಸರು ಕೂಡ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದು, ಈ ವಿಚಾರ ಕಾರ್ಮಿಕರ ಕ್ಯಾಂಪ್ ಗೂ ಹಬ್ಬಿದೆ. ವಿಚಾರ ತಿಳಿದ ಕೂಡಲೇ ಪಾಕ್ ಪೊಲೀಸರ ವಿರುದ್ಧ ಕೆಂಡಾಮಂಡಲರಾದ ಕಾರ್ಮಿಕರು ಸಾಮೂಹಿಕವಾಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೈದ ಚೀನೀಯರ ಪೈಕಿ ಹೆಚ್ಚಿನವರು ಎಂಜಿನಿಯರ್‌ಗಳಾಗಿದ್ದಾರೆ. 
ಇನ್ನು ಘಟನೆ ಕುರಿತು ಪಾಕಿಸ್ತಾನಿ ಮಾಧ್ಯಮಗಳು ಚೀನಾ ಕಾರ್ಮಿಕರ ವಿರುದ್ಧ ಕಿಡಿಕಾರಿದ್ದು. ತಮ್ಮನ್ನು ಶಿಬಿರದಿಂದ ಹೊರಗೆ ಹೋಗಲು ಬಿಡದ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಚೀನೀಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು  ಮಾಧ್ಯಮಗಳು ವರದಿ ಮಾಡಿವೆ. ಅಂತೆಯೇ ಘರ್ಷಣೆಗೆ ಚೀನೀ ರಾಷ್ಟ್ರೀಯರು ಕಾರಣ ಎಂಬ ನಿರ್ಧಾರಕ್ಕೆ ತಾನು ಬಂದಿದ್ದೇನೆ ಎಂದು ಘಟನೆಯ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಅಧಿಕಾರಿ ರಿಝ್ವೆನ್ ಉಮರ್ ಗೊಂಡಲ್ ಹೇಳಿದ್ದಾರೆ. ಪ್ರಸ್ತುತ ವಿದೇಶಿ ನಿರ್ಮಾಣ ಕಂಪೆನಿಯ ‘ದೇಶಿ ಪ್ರಾಜೆಕ್ಟ್ ಮ್ಯಾನೇಜರ್’ ಸೇರಿದಂತೆ ಐವರು ಚೀನಿ ಅಧಿಕಾರಿಗಳನ್ನು ಗಡಿಪಾರು ಮಾಡಲು ಅವರು ಶಿಫಾರಸು ಮಾಡಿದ್ದಾರೆ.
ಒಟ್ಟಾರೆ ತಮ್ಮ ಲೈಂಗಿಕ ಆಸಕ್ತಿಗೆ ಪೊಲೀಸರು ಅಡ್ಡಿಪಡಿಸಿದರು ಎಂಬ ಒಂದೇ ಕಾರಣಕ್ಕೆ ಚೀನೀಯರು ಪಾಕಿಸ್ತಾನ ಪೊಲೀಸರ ಮೇಲೆ ಹಲ್ಲೆ ಮಾಡುವ ಮೂಲಕ ವಿಶ್ವ ಸಮುದಾಯದ ಎದುರು ನಗೆಪಾಟಲಿಗೆ ಈಡಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com