ಬೇರೂತ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಪೂರ್ವ ಸಿರಿಯದಲ್ಲಿನ ಕೊನೆಯ ಕೇಂದ್ರದ ಮೇಲೆ ನಡೆಸಲಾಗಿರುವ ವೈಮಾನಿಕ ಬಾಂಬ್ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ 25 ಸಾರ್ವಜನಿಕರು ಮೃತಪಟ್ಟಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ತಿಳಿಸಿದೆ.
ಇರಾಕ್ ಗಡಿ ಸಮೀಪದಲ್ಲಿ ಇಸಿಸ್ ಉಗ್ರ ಅಲ್ಬು ಕಮಾಲ್ ನ ಹಿಂದಿನ ಭದ್ರ ಕೋಟೆಯ ಉತ್ತರಕ್ಕಿರುವ ಅಲ್ ಶಾಫಾ ಗ್ರಾಮದ ಮೇಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಅಮೆರಿಕ ನೇತೃತ್ವದ ಒಕ್ಕೂಟಗಳು ನಡೆಸಿದ ವೈಮಾನಿಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ವಿಚಕ್ಷಣಕಾರರು ತಿಳಿಸಿದ್ದಾರೆ.
ವೈಮಾನಿಕ ಬಾಂಬ್ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ 25 ಮಂದಿ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ ವಿಚಕ್ಷಣ ಸಂಸ್ಥೆಯ ಮುಖ್ಯಸ್ಥ ರಾಮಿ ಅಬ್ ದೇಲ್ ರೆಹಮಾನ್ ತಿಳಿಸಿದ್ದಾರೆ.