ಎಚ್-1 ಬಿ ವೀಸಾ ತಿದ್ದುಪಡಿಗೆ ಅಮೆರಿಕ ಸಂಸದರ ವಿರೋಧ

ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್​-1 ಬಿ ವೀಸಾ ವಿಸ್ತರಣೆಗೆ ಕಡಿವಾಣ ಹಾಕಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್:  ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್​-1 ಬಿ ವೀಸಾ ವಿಸ್ತರಣೆಗೆ ಕಡಿವಾಣ ಹಾಕಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ​ಸರ್ಕಾರದ ನಿರ್ಧಾರವನ್ನು ಅಮೆರಿಕದ ಕೆಲ ಸಂಸದರು ತೀವ್ರವಾಗಿ ವಿರೋಧಿಸಿದ್ದು, ಈ ನಿರ್ಧಾರದಿಂದಾಗಿ ಅಮೆರಿಕ ಉತ್ತಮ ಪ್ರತಿಭೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಎಚ್-1 ಬಿ ವೀಸಾ ಅವಧಿ ವಿಸ್ತರಣೆಗೆ ಕಡಿವಾಣ ಹಾಕುವುದರಿಂದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವುದಲ್ಲದೆ, ನಮ್ಮ ಸಮಾಜದಲ್ಲಿರುವ ಹಲವು ಪ್ರತಿಭಾವಂತರನ್ನು ಮತ್ತು ತಂತ್ರಜ್ಞರನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದು ಡೆಮಾಕ್ರಟಿಕ್ ಕಾಂಗ್ರೆಸ್ ನ ತುಳಸಿ ಗಬ್ಬರ್ಡ್ ಅವರು ಹೇಳಿದ್ದಾರೆ. ಅಲ್ಲದೆ ಈ ನಿರ್ಧಾರದಿಂದ ಭಾರತದೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದಿದ್ದಾರೆ.
ಟ್ರಂಪ್ ಸರ್ಕಾರದ ಈ ಪ್ರಸ್ತಾವನೆಯಿಂದಾಗಿ ಸುಮಾರು 5ರಿಂದ 7.5 ಲಕ್ಷ ಭಾರತೀಯರು ತವರಿಗೆ ಮರಳುವಂತಾಗುತ್ತದೆ. ಈ ಪೈಕಿ ಹಲವರು ಸಣ್ಣ ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಸು ಕಾರ್ಯದಲ್ಲಿ ತೊಡಗುವ ಮೂಲಕ ಅಮೆರಿಕದ ಬಲಿಷ್ಠ ಆರ್ಥಿಕತೆಗೆ ನೆರವಾಗುತ್ತಿದ್ದಾರೆ ಎಂದು ಗಬ್ಬರ್ಡ್ ಅವರು ಹೇಳಿದ್ದಾರೆ.
ಈ ಮಧ್ಯೆ, ಅಮೆರಿಕ ಎಚ್‌-1ಬಿ ವೀಸಾ ವಿಸ್ತರಣೆಯನ್ನು ತಡೆದರೆ, ಅಮೆರಿಕ ಮತ್ತು ಭಾರತ ಎರಡೂ ದೇಶಗಳಿಗೆ ಹಾನಿಯಾಗಲಿದೆ ಎಂದು ಸಾಫ್ಟ್‌ವೇರ್‌ ಉದ್ದಿಮೆಯ ಪ್ರಾತಿನಿಧಿಕ ಮಂಡಳಿಯಾದ ನಾಸ್ಕಾಮ್‌ ಪ್ರತಿಪಾದಿಸಿದೆ.
ಅಮೆರಿಕವು ಎಚ್‌-1ಬಿ ವೀಸಾವನ್ನು ಕುಂಠಿತಗೊಳಿಸಲು ಹೊಸ ನಿಯಮಾವಳಿ ರೂಪಿಸಲು ಯೋಚಿಸುತ್ತಿರಬಹುದು. ಆದರೆ ಇದು ಕೇವಲ ಭಾರತೀಯ ಮಾಹಿತಿ ತಂತ್ರಜ್ಞಾನ ವಲಯಕ್ಕೇ ಸೀಮಿತವಾಗಿರುವ ಸಮಸ್ಯೆಯಲ್ಲ. ವೈದ್ಯಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಎಚ್‌-1ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿ ಸೇವೆ ಸಲ್ಲಿಸುತ್ತಿರುವ ಭಾರತೀಯರಿದ್ದಾರೆ. ನಿರ್ಬಂಧದಿಂದ ಅವರಿಗೂ ತೊಡಕು ಉಂಟಾಗಲಿದೆ. ನಿಜಕ್ಕೂ ಅಮೆರಿಕದಲ್ಲಿ ಅನುಭವಿ ಹಾಗೂ ವೃತ್ತಿಪರ ಕೌಶಲ್ಯವಿರುವವರ ಕೊರತೆ ಬಹಳ ಇದೆ. ಹೀಗಾಗಿ ನಿರ್ಬಂಧ ಹೇರಿದರೆ ಅವರಿಗೇ ಹೆಚ್ಚು ನಷ್ಟವಾಗಲಿದೆ. ಆದರೆ ಗ್ರೀನ್‌ಕಾರ್ಡ್‌ ಅರ್ಜಿಗಳಿಗೆ ಸಂಬಂಧಿಸಿಯೂ ಅಮೆರಿಕ ಕಡಿವಾಣ ಹೇರಿದರೆ, ಭಾರತದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ನಾಸ್ಕಾಮ್‌ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಎಚ್ 1 ಬಿ ಮತ್ತು ಎಲ್ 1 ವೀಸಾ ಪಡೆಯಲು ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದರು. ಈ ಪ್ರಸ್ತಾವಕ್ಕೆ ಭಾರತ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com