ನ್ಯೂಯಾರ್ಕ್: ನ್ಯೂಯಾರ್ಕ್ ನ ಮ್ಯಾನ್ ಹ್ಯಾಟನ್ ನಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐಶಾರಾಮಿ ಬಹುಮಹಡಿ ಕಟ್ಟಡ ಟ್ರಂಪ್ ಟವರ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ ಎಂದು ಸೋಮವಾರ ನ್ಯೂಯಾರ್ಕ್ ಅಗ್ನಿ ಶಾಮಕ ಇಲಾಖೆ ತಿಳಿಸಿದೆ.
ಇಂದು ಬೆಳಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಟ್ರಂಪ್ ಟವರ್‌ನ ಕೊನೆ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಆದರೆ ಜೀವ ಹಾನಿ ಆಗಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ ಎಂದು ಇಲಾಖೆ ಹೇಳಿದೆ.
58 ಅಂತಸ್ತುಗಳ ಈ ಐಶಾರಾಮಿ ಬಹುಮಹಡಿ ಕಟ್ಟಡದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿವಾಸ, ಅವರ ರಿಯಲ್ ಎಸ್ಟೇಟ್ ಉದ್ಯಮದ ಕೇಂದ್ರ ಕಚೇರಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳ ನಿವಾಸ, ಜನಪ್ರಿಯ ಕಂಪೆನಿಗಳ ಕೇಂದ್ರ ಕಚೇರಿಗಳು, ಮಾಲ್‌ಗಳು, ಚಿತ್ರಮಂದಿರ ಎಲ್ಲವೂ ಇವೆ.
ಬೆಂಕಿ ಅವಘಡ ಸಂಭವಿಸಿದಾಗ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ನ ಶ್ವೇತಭವನದಲ್ಲಿದ್ದರು.