ಇಸ್ಲಾಮಾಬಾದ್: ಮುಂಬೈ ದಾಳಿಯ ರೂವಾರಿ, ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸೈಯದ್ ಬುಧವಾರ ಪಾಕಿಸ್ತಾನದಾದ್ಯಂತ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಜುಲೈ 25ರಂದು ನಡೆಯುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಯುಡಿ ರಾಜಕೀಯ ಅಂಗವಾದ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಸಹ ಸ್ಪರ್ಧಿಸಿದ್ದು, ಹಫೀಜ್ ಸಯೀದ್ ಇಂದಿನಿಂದ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ್ದಾರೆ.
ಹಫೀಸ್ ಸಯೀದ್ ಇಂದು ಲಾಹೋರ್, ಇಸ್ಲಾಮಾಬಾದ್, ಸಹಿವಾಲ್, ಫೈಸಲಾಬಾದ್ ನಲ್ಲಿ ಎಂಎಂಎಲ್ ಪಕ್ಷದ ಕಚೇರಿ ಉದ್ಘಾಟಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಸಯೀದ್, ಪಾಕಿಸ್ತಾನದ ನದಿಗಳಿಗೆ ಭಾರತ ಅಣೆಕಟ್ಟುಗಳನ್ನು ನಿರ್ಮಿಸದಂತೆ ತಡೆಯುವವರಿಗೆ ಮತ ಹಾಕಿ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ನೀರಿನ ಬಿಕ್ಕಟ್ಟ ಎದುರಾಗುವುದಿಲ್ಲ ಎಂದರು.
ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಕಾಪಾಡಿಕೊಳ್ಳಲು ಮತ್ತು ಕಾಶ್ಮೀರಿಗಳಿಗೆ ಸ್ವಾತಂತ್ರ್ಯವನ್ನು ಪಡೆಯಲು ಹಾಗೂ ಪಾಕಿಸ್ತಾನವನ್ನು ಇಸ್ಲಾಂನ ಬಲವಾದ ಕೋಟೆಯಾಗಿ ಮಾಡಲು ಎಂಎಂಲ್ ಗೆ ಮತ ನೀಡುವಂತೆ ಸಯೀದ್ ಕರೆ ನೀಡಿದರು.
ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಸಯೀದ್ ಮತ್ತು ಅಳಿಯ ಖಾಲಿದ್ ವಾಲೀದ್ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.