ಸಂಗ್ರಹ ಚಿತ್ರ
ವಿದೇಶ
ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ನವಾಜ್ ಷರೀಫ್ ಬಂಧನ: ಪಾಕ್ ಸಚಿವ
ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ನಿಂದ 10 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‌ನಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.
ಲಾಹೋರ್: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ನಿಂದ 10 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‌ನಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.
ಈ ಬಗ್ಗೆ ಸ್ವತಃ ಪಾಕಿಸ್ತಾನದ ಮಾಹಿತಿ ಸಚಿವ ಸೈಯದ್ ಅಲಿ ಜಾಫರ್ ಅವರು ಮಾಹಿತಿ ನೀಡಿದ್ದು, ನವಾಜ್ ಷರೀಫ್ ಅವರು ಸುಪ್ರೀಂಕೋರ್ಟ್ ಆದೇಶದ ಅನ್ವಯ ಅಪರಾಧಿ, ಅವರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಹೀಗಾಗಿ ಅವರು ಪಾಕಿಸ್ತಾನಕ್ಕ ಮರಳುತ್ತಿದ್ದಂತೆಯೇ ಅವರನ್ನು ಬಂಧಿಸಲಾಗುತ್ತದೆ. ಅವರನ್ನು ಪಾಕಿಸ್ತಾನದಲ್ಲಿ ರ್ಯಾಲಿ ನಡೆಸಲು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ನವಾಜ್ ಷರೀಫ್ ಮರಳುವ ಸಂದರ್ಭ ಅವರ ಬೆಂಬಲಿಗರು ರ‍್ಯಾಲಿ ನಡೆಸಿ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುವ ಸಾಧ್ಯತೆಯಿರುವುದರಿಂದ ಮುಂಜಾಗೃತಾ ಕ್ರಮವಾಗಿ ಈಗಾಗಲೇ ಅಪಾರ ಸಂಖ್ಯೆಯ ಬೆಂಬಲಿಗರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜುಲೈನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ನವಾಜ್ ಷರೀಫ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ನಂತರ ಕಳೆದ ವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಲಂಡನ್‌ನಲ್ಲಿ ಐಷಾರಾಮಿ ಬಂಗಲೆ ಸೇರಿದಂತೆ ಅಕ್ರಮ ಆಸ್ತಿ ಖರೀದಿಸಿದ್ದ ಆರೋಪದ ಮೇರೆಗೆ ನವಾಜ್ ಷರೀಫ್‌ಗೆ 10 ವರ್ಷ ಜೈಲು ಶಿಕ್ಷೆ ಮತ್ತು ಪನಾಮ ಹಗರಣದಲ್ಲಿ ಪುತ್ರಿ ಮರಿಯಮ್ ನವಾಜ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ನವಾಜ್ ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿದ್ದು, ಪಾಕ್ ಸುಪ್ರೀಂಕೋರ್ಟ್ ಶಿಕ್ಷೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಲಾಹೋರ್‌ಗೆ ಮರಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಲಾಹೋರ್ ಏರ್‌ಪೋರ್ಟ್ ಮತ್ತು ಅಲ್ಲಿನ ರಸ್ತೆಗಳಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ