ಗೂಢಚಾರಿ ಹತ್ಯೆ ವಿವಾದ: 23 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ರಷ್ಯಾ

ರಷ್ಯಾದ ಮಾಜಿ ಗೂಢಚಾರಿ ಸೆರ್ಗೆಯ್ ಸ್ಕೈಪಾಲ್ ಗೆ ಇಂಗ್ಲೆಂಡಿನ ಸಾಲಿಸ್ಬುರಿಯ ಅವರ ಮನೆಯಲ್ಲಿ ವಿಷ ...
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಮಾಸ್ಕೊ: ರಷ್ಯಾದ ಮಾಜಿ ಗೂಢಚಾರಿ ಸೆರ್ಗೆಯ್ ಸ್ಕೈಪಾಲ್ ಗೆ ಇಂಗ್ಲೆಂಡಿನ ಸಾಲಿಸ್ಬುರಿಯ ಅವರ ಮನೆಯಲ್ಲಿ ವಿಷ ನೀಡಿ ಹತ್ಯೆ ಮಾಡಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾ 23 ದೇಶಗಳ 59 ರಾಯಭಾರಿಗಳನ್ನು ವಜಾಗೊಳಿಸಿದೆ.

ಬ್ರಿಟನ್‌ನಲ್ಲಿ ನೆಲೆಸಿರುವ ರಷ್ಯಾದ ಮಾಜಿ ಗೂಢಚಾರಿ ಸ್ಕ್ರಿಪಾಲ್ ಹಾಗೂ ಅವರ ಪುತ್ರಿ ಯುಲಿಯಾ ಮೇಲೆ ಇತ್ತೀಚೆಗೆ ನಡೆದಿರುವ ಹತ್ಯೆ ಪ್ರಯತ್ನದ ಹಿಂದೆ ರಷ್ಯಾ ಸರ್ಕಾರದ ಕೈವಾಡವಿದೆಯೆಂದು ಬ್ರಿಟನ್, ಅಮೆರಿಕಾ ಮೊದಲಾದ ದೇಶಗಳು ರಾಜತಾಂತ್ರಿಕ ಸಿಬ್ಬಂದಿಯನ್ನು ದೇಶದಿಂದ ಉಚ್ಛಾಟಿಸಿದ್ದಕ್ಕೆ ಪ್ರತಿಯಾಗಿ ರಷ್ಯಾ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.

ರಷ್ಯಾದ ಈ ಕ್ರಮಕ್ಕೆ ರಾಜತಾಂತ್ರಿಕ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದು ತಮ್ಮ ಪ್ರತಿಭಟನೆಯ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿಕೆ ತಿಳಿಸಿದೆ.

ಮಾಧ್ಯಮದಲ್ಲಿ ಬಂದಿರುವ ವರದಿ ಪ್ರಕಾರ, ಉಕ್ರೇನ್ ನ 13 ರಾಯಭಾರಿಗಳು, ಕೆನಡಾ, ಪೋಲೆಂಡ್, ಜರ್ಮನಿಯ ತಲಾ ನಾಲ್ವರು, ಲುತಿಯಾನಾ, ಝೆಕ್ ಗಣರಾಜ್ಯ ಮತ್ತು ಮೊಲ್ಡೊವಾದ ತಲಾ ಮೂವರು ಮತ್ತು ಇಟಲಿ, ನೆದರ್ಲ್ಯಾಂಡ್, ಸ್ಪೈನ್ ಮತ್ತು ಡೆನ್ಮಾರ್ಕ್ ನ ತಲಾ ಇಬ್ಬರು ರಾಯಭಾರಿಗಳನ್ನು ಅವರ ದೇಶಕ್ಕೆ ಕಳುಹಿಸಿದೆ. ಅಲ್ಲದೆ ಫಿನ್ ಲ್ಯಾಂಡ್, ಲಾಟ್ವಿಯಾ, ಸ್ವೀಡನ್, ರೊಮಾನಿಯಾ, ನಾರ್ವೆ, ಐರ್ಲೆಂಡ್, ಕ್ರೊಯೆಶಿಯಾ ಮತ್ತು ಇಸ್ಟೊನಿಯಾ ರಾಯಭಾರಿಗಳನ್ನು ಕೂಡ ರಷ್ಯಾ ವಜಾಗೊಳಿಸಿದೆ.

ಫ್ರಾನ್ಸಿನ ನಾಲ್ವರು ರಾಯಭಾರಿಗಳನ್ನು ಕೂಡ ಇದೇ ಸಂದರ್ಭದಲ್ಲಿ ವಜಾಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com