ಇಂಡೊನೇಷ್ಯಾದ ಮೂರು ಚರ್ಚ್ ಗಳ ಮೇಲೆ ಬಾಂಬ್ ದಾಳಿ : 9 ಸಾವು, 40 ಮಂದಿಗೆ ಗಾಯ

ಇಂಡೊನೇಷ್ಯಾದ ಎರಡನೇ ಅತಿ ದೊಡ್ಡ ನಗರ ಸುರಭಯದಲ್ಲಿ ಇಂದು ಮುಂಜಾನೆ ಮೂರು ಚರ್ಚ್ ಗಳ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ
ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವುದು
ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವುದು

ಜಕಾರ್ತ :  ಇಂಡೊನೇಷ್ಯಾದ ಎರಡನೇ ಅತಿ ದೊಡ್ಡ ನಗರ ಸುರಭಯದಲ್ಲಿ ಇಂದು ಮುಂಜಾನೆ  ಮೂರು ಚರ್ಚ್ ಗಳ ಮೇಲೆ  ಆತ್ಮಹತ್ಯಾ ಬಾಂಬರ್ ದಾಳಿ  ನಡೆಸಿದ್ದು,  9 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ ಮೇರಿಯಾ ರೋಮನ್ ಕ್ಯಾಥೊಲಿಕ್ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಮೊದಲ ದಾಳಿ ನಡೆದಿದ್ದು, ಶಂಕಿತ ಬಾಂಬರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 40 ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ವಕ್ತಾರ ಪ್ರಾನ್ಸ್  ಬರುಂಗ್ ಮಾಂಗೇರಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇದಾದ ಒಂದು ನಿಮಿಷದ ನಂತರ  ಡಿಪೊನಿಗೊರೊದ ಕ್ರಿಶ್ಟಿಯನ್ ಚರ್ಚ್ ನಲ್ಲಿ ಎರಡನೇ ಬಾಂಬ್ ಸ್ಪೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.  ಪಂಟೆಕೊಸ್ತಾ ಚರ್ಚ್ ನಲ್ಲಿ ಮೂರನೇ ದಾಳಿ ನಡೆದಿದ್ದು, ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಂಗೇರಾ ತಿಳಿಸಿದ್ದಾರೆ.

 ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಜಕಾರ್ತದ ಕಾರಾಗೃಹದ ಬಳಿ ಸಂಭವಿಸಿದ್ದ ಹಿಂಸಾಚಾರದ ನಂತರ ಮುಸ್ಲಿಂ ಪ್ರಾಬಲ್ಯದ ಇಂಡೊನೇಷ್ಯಾದಲ್ಲಿ  ಹೊಸದಾಗಿ ಚರ್ಚ್ ಗಳ ಮೇಲೆ ದಾಳಿಯಾಗಿದೆ. ಜಕಾರ್ತದ ಹಿಂಸಾಚಾರದಲ್ಲಿ ಆರು ಪೊಲೀಸ್ ಅಧಿಕಾರಿಗಳು ಹಾಗೂ ಮೂವರು ಖೈದಿಗಳು ಸಾವನ್ನಪ್ಪಿದ್ದರು. ಐಎಸ್ ಐಎಸ್ ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತಿಕೊಂಡಿತ್ತು.

ಬಾಲಿಯಲ್ಲಿ 2002ರಲ್ಲಿ ಅಲ್ ಖೈದಾ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 202 ಮಂದಿ ಸಾವನ್ನಪ್ಪಿದ್ದರು. ಇತ್ತೀಚಿನ ದಿನಗಳಲ್ಲಿ ಆ ದೇಶ ಐಸೀಸ್ ಉಗ್ರರ ಭೀತಿಯಿಂದ ನರಳುತ್ತಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com